ಫ್ರೆಂಚ್ ಓಪನ್ 2021 -ಗಾಯಗೊಂಡ ಆಶ್ ಬಾರ್ಟಿ ಔಟ್, ಸ್ವಿಟೊಲಿನಾ, ಸೋಫಿಯಾ ಮುನ್ನಡೆ
ವಿಶ್ವದ ನಂಬರ್ ವನ್ ಮಹಿಳಾ ಆಟಗಾರ್ತಿ ಆಸ್ಟ್ರೇಲಿಯಾದ ಆಶ್ ಬಾರ್ಟಿ ಅವರು ಗಾಯಗೊಂಡು ಪ್ರತಿಷ್ಠಿತ ಫ್ರೆಂಚ್ ಓಪನ್ ಟೂರ್ನಿಯಿಂದ ಹೊರನಡೆದಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ ಆಶ್ ಬಾರ್ಟಿ ಅವರು ಮೊದಲ ಸೆಟ್ ನಲ್ಲಿ 1-6ರಿಂದ ಪೊಲೆಂಡ್ ನ ಮೆಗ್ಡಾ ವಿರುದ್ಧ ಹಿನ್ನಡೆ ಅನುಭವಿಸಿದ್ದರು. ಹಾಗೇ ಎರಡನೇ ಸೆಟ್ ನಲ್ಲಿ 2-2ರಿಂದ ಸಮಬಲದಲ್ಲಿ ಸಾಗುತ್ತಿದ್ದ ಪಂದ್ಯದ ವೇಳೆ ಬಾರ್ಟಿ ಅವರು ತೊಡೆ ಸ್ನಾಯು ಸೆಳೆತದಿಂದಾಗಿ ಪಂದ್ಯದಿಂದ ಹೊರನಡೆದಿದ್ದಾರೆ.
ಆಶ್ ಬಾರ್ಟಿ ಅವರು 2019ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು. 25ರ ಹರೆಯದ ಬಾರ್ಟಿ ಅವರು ಈ ಬಾರಿ ನಿರಾಸೆ ಅನುಭವಿಸಿದ್ದರು.
ಮಹಿಳೆಯರ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಅಮೆರಿಕಾದ ಕೊಕೊ ಗಾಫ್ ಅವರು 6-3, 7-6ರಿಂದ ಚೀನಾದ ವಾಂಗ್ ಕ್ಯುಯಾಂಗ್ ಅವರನ್ನು ಸೋಲಿಸಿ ಮೂರನೇ ಹಂತ ತಲುಪಿದ್ದಾರೆ.
ಇನ್ನೊಂದು ಮಹಿಳೆಯರ ಸಿಂಗಲ್ಸ್ ನಲ್ಲಿ ವಿಶ್ವದ ಆರನೇ ಶ್ರೇಯಾಂಕಿತೆ ಎಲಿನಾ ಸ್ವಿಟ್ಲೋಲಿನಾ 6-0, 6-4ರಿಂದ ಅಮೆರಿಕಾದ ಆನ್ ಲಿ ಅವರನ್ನು ಸುಲಭವಾಗಿ ಮಣಿಸಿದ್ರು.
ಇನ್ನು ಕಳೆದ ಬಾರಿಯ ರನ್ನರ್ ಅಪ್ ಹಾಗೂ 2020ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸೋಫಿಯಾ ಕೆನಿನ್ ಅವರು ಎರಡನೇ ಸುತ್ತಿನ ಪಂದ್ಯದಲ್ಲಿ 7-5, 6-3ರಿಂದ ಅಮೆರಿಕಾದ ಹೇಲೇಯ್ ಬಾಪ್ಟಿಸ್ಟೆ ಅವರನ್ನು ಪರಾಭವಗೊಳಿಸಿದ್ರು.