ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!
ದಕ್ಷಿಣ ಆಫ್ರಿಕಾ ಮತ್ತು ಕ್ರಿಕೆಟ್ ಆಟಕ್ಕೆ ಶತಶತಮಾನಗಳ ಇತಿಹಾಸವಿದೆ. ಟೆಸ್ಟ್ ಕ್ರಿಕೆಟ್‍ಗೆ ಮಾನ್ಯತೆ ಪಡೆದ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕೆ ಇದೆ. 146 ವರ್ಷಗಳ ದಕ್ಷಿಣ ಆಫ್ರಿಕಾದ ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ಮೊದಲ ಬಾರಿ ಐಸಿಸಿ ಟೆಸ್ಟ್ ಚಾಂಪಿಯನ್‍ಷಿಪ್ ಟ್ರೋಫಿ ಗೆದ್ದು ಚರಿತ್ರೆ ಸೃಷ್ಟಿಸಿದೆ. 27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಮೂಲಕ ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಅಳಿಸಿ ಹಾಕಿದೆ. ಕಾಮನಬಿಲ್ಲಿನ ರಾಷ್ಟ್ರದ ಹುಡುಗರು ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಣದಲ್ಲಿ ನಾಟ್ಯ ಮಯೂರಿಯಂತೆ ಮನಸಾರೆ ಕುಣಿದಾಡಿ ಸಂಭ್ರಮಿಸಿದ್ದು ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದೆ.
ಅದೇನು ಕಾಕತಾಳಿಯವೋ ಗೊತ್ತಿಲ್ಲ… ದಕ್ಷಿಣ ಆಫ್ರಿಕಾದ ಗಾಂಧಿ ಅಂತಲೇ ಹೆಸರಾದ ನೆಲ್ಸನ್ ಮಂಡೆಲಾ ಸಮಾನತೆಗಾಗಿ, ಪ್ರಜಾಪ್ರಭುತ್ವಕ್ಕಾಗಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿ 27 ವರ್ಷಗಳ ಕಾಲ ಸೆರೆಮನೆ ವಾಸ ಮಾಡಿದ್ದರು. ಕೊನೆಗೆ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಆ ದೇಶದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದ್ದನ್ನು ಇತಿಹಾಸ ಎಂದಿಗೂ ಮರೆಯುವುದಿಲ್ಲ. ಗಾಂಧೀಜಿಯವರ ಶಾಂತಿ ಮಂತ್ರವನ್ನು ಪಠಿಸುತ್ತಾ, ಬಿಳಿಯರ ವಿರುದ್ಧ ಹೋರಾಟ ನಡೆಸಿ ದಕ್ಷಿಣ ಆಫ್ರಿಕಾಗೆ ಪ್ರಜಾಪ್ರಭುತ್ವವನ್ನು ತಂದುಕೊಟ್ಟ ಆಧುನಿಕ ಗಾಂಧಿ ನೆಲ್ಸನ್ ಮಂಡೆಲಾ..
ಇದೀಗ 27 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾದ ಮೂಲ ನಿವಾಸಿ ಬುಡಕಟ್ಟು ಸಮುದಾಯದ ತೆಂಬಾ ಬವುಮಾ ಸಾರಥ್ಯದ ದಕ್ಷಿಣ ಆಫ್ರಿಕಾ ತಂಡ ಟೆಸ್ಟ್ ಚಾಂಪಿಯನ್‍ಷಿಪ್ ಆಗಿ ಹೊರಹೊಮ್ಮಿದೆ. ಹಾಗೆ ನೋಡಿದ್ರೆ ವಿಶ್ವ ಕ್ರಿಕೆಟ್‍ನಲ್ಲಿ ದಕ್ಷಿಣ ಆಫ್ರಿಕಾ ಅತ್ಯಂತ ಬಲಿಷ್ಠ ತಂಡ. ಆದ್ರೆ ಐಸಿಸಿ ಟ್ರೋಫಿಯ ಟೂರ್ನಿಗಳಲ್ಲಿ ನತದೃಷ್ಟ ಟೀಮ್. 21 ವರ್ಷಗಳ ನಿಷೇಧದ ಬಳಿಕ 1991ರಲ್ಲಿ ದಕ್ಷಿಣ ಆಫ್ರಿಕಾ ವಿಶ್ವ ಕ್ರಿಕೆಟ್‍ಗೆ ಪ್ರವೇಶ ಪಡೆದುಕೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಒಂದಲ್ಲ ಬರೋಬ್ಬರಿ 11 ಐಸಿಸಿ ಟೂರ್ನಿಯ ಸೆಮಿಫೈನಲ್ ಪಂದ್ಯಗಳಲ್ಲಿ ಹೃದಯಘಾತವಾಗಿತ್ತು. ಒಂದು ಬಾರಿ ಫೈನಲ್‍ನಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿತ್ತು. ಒಟ್ಟಾರೆ, 1998ರ ಐಸಿಸಿ ನಾಕೌಟ್ ಟೂರ್ನಿ ಗೆದ್ದ ಬಳಿಕ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಪ್ರಶಸ್ತಿ ಗೆದ್ದುಕೊಂಡಿದೆ.
ಅಂದ ಹಾಗೇ ದಕ್ಷಿಣ ಆಫ್ರಿಕಾ ವಿಶ್ವ ಕ್ರಿಕೆಟ್‍ಗೆ ಅದ್ಭುತ ಕ್ರಿಕೆಟಿಗರನ್ನು ಪರಿಚಯಿಸಿದೆ. ಆಧುನಿಕ ಕ್ರಿಕೆಟ್ ಅಂದ್ರೆ 1991ರ ಬಳಿಕ ಕೆಪ್ಲರ್ ವೆಸೆಲ್ಸ್, ಹ್ಯಾನ್ಸಿ ಕ್ರೋನಿಯೆ, ಶಾನ್ ಪೊಲಾಕ್, ಗ್ರೇಮ್ ಸ್ಮಿತ್, ಎಬಿ ಡಿವಿಲಿಯರ್ಸ್ ರಂತಹ ಅಪ್ರತಿಮ ನಾಯಕರು ಹರಿಣಗಳ ತಂಡವನ್ನು ಮುನ್ನಡೆಸಿದ್ದರು. ಆದ್ರೆ ಅವರಿಗೆಲ್ಲಾ ಐಸಿಸಿ ಟ್ರೋಫಿ ಎನ್ನುವುದು ಮರೀಚಿಕೆಯಾಗಿತ್ತು. ಆದ್ರೆ ಈಗ ತೆಂಬಾ ಬವುಮಾ ಎಂಬ ವಾಮನಮೂರ್ತಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಎವರ್ ಗ್ರೀನ್ ನಾಯಕನಾಗಿದ್ದಾನೆ.
ಹೌದು, ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ದಕ್ಷಿಣ ಆಫ್ರಿಕಾ ಗೆದ್ದಿರುವುದು ವಿಶೇಷವೇ. ಯಾಕಂದ್ರೆ ಐಸಿಸಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿದ್ರೆ ಟ್ರೋಫಿ ಗ್ಯಾರಂಟಿ ಎಂಬ ಮಾತು ಈ ಸಲ ಸುಳ್ಳಾಗಿದೆ. 15 ವರ್ಷಗಳ ಬಳಿಕ ಇದೇ ಮೊದಲ ಬಾರಿ ಆಸೀಸ್ ಫೈನಲ್‍ನಲ್ಲಿ ಸೋಲು ಅನುಭವಿಸಿದೆ. ಹರಿಣಗಳ ಆರಂಭಿಕ ಬ್ಯಾಟರ್ ಏಡನ್ ಮಾರ್ಕರಂ ಶತಕ ದಾಖಲಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರೂ ಹೈಲೆಟ್ ಆಗಿರೋದು ನಾಯಕ ತೆಂಬಾ ಬವುಮಾ.
ನೆನಪಿರಬಹುದು.. 1999ರ ವಿಶ್ವಕಪ್ ಸೆಮಿಫೈನಲ್‍ನಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ವಾ ಕ್ಯಾಚ್ ಅನ್ನು ಹರ್ಷಲ್ ಗಿಬ್ಸ್ ಕೈಚೆಲ್ಲಿದ್ರು. ಆಗ ಸ್ಟೀವ್ ವಾ ಗಿಬ್ಸ್ ಬಳಿ ಬಂದು ನೀನು ಬರೀ ಕ್ಯಾಚ್ ಕೈಚೆಲ್ಲಿದ್ದಲ್ಲ… ವಿಶ್ವಕಪ್ ಟ್ರೋಫಿಯನ್ನು ಕೈಚೆಲ್ಲಿಕೊಂಡೆ ಎಂದು ಹೇಳಿದ್ದರು ಎಂಬ ಮಾತಿದೆ. ಆ ಪಂದ್ಯದಲ್ಲಿ ಸ್ಟೀವ್ ವಾ ಶತಕ ಸಿಡಿಸಿದ್ದರು. ಅದೇ ರೀತಿ ವಿಶ್ವ ಟೆಸ್ಟ್ ಚಾಂಪಿಯನ್ಸ್ ಟ್ರೋಫಿಯಲ್ಲೂ ಸ್ಟೀವ್ ಸ್ಮಿತ್ ಅವರು ಬವುಮಾ ಅವರನ್ನು ಕ್ಯಾಚ್ ಕೈಚೆಲ್ಲಿದ್ರು. ಪರಿಣಾಮ, ಬವುಮಾ ಅರ್ಧಶತಕ ದಾಖಲಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದರು.
ಅಷ್ಟಕ್ಕೂ ತೆಂಬಾ ಬವುಮಾ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕನಾಗಿದ್ದೇ ಅಚ್ಚರಿ. ಹರಿಣಗಳ ದೇಶದಲ್ಲಿ ಕಪ್ಪು ವರ್ಣೀಯರು ಮೂಲ ನಿವಾಸಿಗಳಾಗಿದ್ರೂ ಅವರು ಜೀತದಾಳುಗಳೇ. ಹಾಗೇ ಕ್ರಿಕೆಟ್ ತಂಡದಲ್ಲಿ ಕೋಟಾದಡಿಯಲ್ಲಿ ಸ್ಥಾನ ನೀಡಲಾಗುತ್ತಿತ್ತು. ಅದರಲ್ಲೂ ಬಿಳಿಯ ಆಟಗಾರರ ಪ್ರಭಾವದ ನಡುವೆಯೂ ದಕ್ಷಿಣ ಆಫ್ರಿಕಾದ ಬುಡಕಟ್ಟು ಸಮುದಾಯದ ಬವುಮಾಗೆ ನಾಯಕತ್ವ ಒಲಿದು ಬಂದಿರುವುದು ಆತನ ಪ್ರತಿಭೆ, ಸಾಮರ್ಥ್ಯದಿಂದಲೇ ಹೊರತು ಯಾವುದೇ ಮೀಸಲಾತಿ ಕೋಟಾದಿಂದ ಅಲ್ಲ. ಇಂದಿಗೂ ವರ್ಣಭೇಧದ ಸಂಘರ್ಷ ನಡೆಯುತ್ತಿದ್ರೂ ಹರಿಣಗಳ ತಂಡವನ್ನು ಒಗ್ಗಟ್ಟಿನಿಂದ ಮುನ್ನಡೆಸಿ ಐಸಿಸಿ ಟ್ರೋಫಿ ಗೆದ್ದಿರುವುದು ಬವುಮಾನ ಅಪ್ರತಿಮ ಸಾಧನೆ. ಸಾಮಾನ್ಯವಾಗಿ ದಕ್ಷಿಣ ಆಫ್ರಿಕಾ ತಂಡದಲ್ಲಿ ಕಪ್ಪುವರ್ಣೀಯ ಬೌಲರ್‌ಗಳು ಕಾಣಿಸಿಕೊಳ್ಳುತ್ತಿದ್ದರು. ಆದ್ರೆ ಒಬ್ಬ ಬ್ಯಾಟರ್ ಆಗಿ, ತಂಡದ ನಾಯಕನಾಗಿ ಕಪ್ಪುವರ್ಣೀಯ ಆಟಗಾರ ತಂಡವನ್ನು ಮುನ್ನಡೆಸಿದ್ದು ಇದೇ ಮೊದಲ ಬಾರಿ. ಐಸಿಸಿ ಟೆಸ್ಟ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ತಂಡದ ಕ್ಯಾಪ್ಟನ್ ಎಂಬ ಹೆಗ್ಗಳಿಕೆಯೂ ಮೊದಲ ಸಲ.
ನಿಜ, ತೆಂಬಾ ಬವುಮಾ ತನ್ನ ಕ್ರಿಕೆಟ್ ಬದುಕು ಮತ್ತು ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ. 5.4 ಅಡಿ ಎತ್ತರವಿದ್ರೂ ಬವುಮಾನನ್ನು ಕುಳ್ಳ ಎಂದು ತಮಾಷೆ ಮಾಡುತ್ತಿದ್ದರು. ನೋಡೋಕೆ ಚೆನ್ನಾಗಿಲ್ಲ ಅಂತ ಕುರೂಪಿ ಅಂತ ಕರೆಯುತ್ತಿದ್ರು. ನಡೆಯುವ ಶೈಲಿಯನ್ನು ಗೇಲಿ ಮಾಡುತ್ತಿದ್ರು. ಮೀಸಲಾತಿ ಕೋಟದಲ್ಲಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾನೆ ಎಂದು ಬೈಯುತ್ತಿದ್ರು. ತಂಡದ ನಾಯಕನಾಗಿದ್ರೂ ಕಪ್ಪು ವರ್ಣೀಯ ಅಂತ ಜರಿಯುತ್ತಿದ್ರು. ಫಾರ್ಮ್ ಕಳೆದುಕೊಂಡಾಗ ಅಪಮಾನ ಮಾಡುತ್ತಿದ್ದರು. ಅದ್ಭುತ ಪ್ರದರ್ಶನ ನೀಡುತ್ತಿದ್ರೂ ಯಾರು ಕೂಡ ಕೊಂಡಾಡುತ್ತಿರಲಿಲ್ಲ. ಪ್ರತಿ ಹೆಜ್ಜೆಯಲ್ಲೂ ಅವಮಾನ, ನಿಂದನೆ, ಟೀಕೆ, ಆರೋಪಗಳನ್ನು ಎದುರಿಸಿಕೊಂಡೇ ಆಟವಾಡುತ್ತಿದ್ದ. ಆದ್ರೆ ಎಲ್ಲದಕ್ಕೂ ಮೌನವಾಗಿದ್ದುಕೊಂಡೇ ಉತ್ತರ ನೀಡುತ್ತಿದ್ದ ತೆಂಬಾ ಬವುಮಾ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅಪ್ರತಿಮ ನಾಯಕನಾಗಿರುವುದು ಒಂದು ಬುಡಕಟ್ಟು ಸಮುದಾಯದ ಯುವಕನ ತಾಕತ್ತು, ಪ್ರತಿಭೆ ಮತ್ತ ಕಿಚ್ಚು ಎಂಬುದುರಲ್ಲಿ ಅನುಮಾನವೇ ಇಲ್ಲ.
ಒಂದು ವಿಚಾರ ಗೊತ್ತಿರಲಿ..ಇವತ್ತು ದಕ್ಷಿಣ ಆಫ್ರಿಕಾ ಟೆಸ್ಟ್ ಚಾಂಪಿಯನ್ ಆಗಿರುವುದು ಸಹಜವಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಭಿಮಾನಿಗಳಿಗೆ ಸಂಭ್ರಮದ ದಿನ. ಆದ್ರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಭಿಮಾನಿಗಳಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಹರಿಣಗಳು ಚಾಂಪಿಯ ನ್‍ಪಟ್ಟಕ್ಕೇರಿರುವುದನ್ನು ನೋಡಿ ಖುಷಿ ಪಟ್ಟಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾವೇ ಗೆಲ್ಲಬೇಕು ಎಂದು ಬೆಂಬಲ ನೀಡಿದ್ದಾರೆ. ಯಾಕಂದ್ರೆ ಚೋಕರ್ಸ್ ಎಂಬ ಕಪ್ಪು ಚುಕ್ಕೆ ಮಾಯವಾಗಬೇಕು ಎಂಬುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಅಭಿಲಾಷೆಯೂ ಆಗಿತ್ತು. ಜೊತೆಗೆ ಭಾರತದ ವಿರುದ್ಧ ಆಡುತ್ತಿಲ್ಲ… ಆಸೀಸ್ ತಂಡ ಗೆಲ್ಲಬಾರದು ಎಂಬುದು ಮನದಾಸೆಯೂ ಆಗಿತ್ತು. ಅಷ್ಟೇ ಅಲ್ಲ, ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ಅದೊಂದು ರೀತಿಯ ಬಾಂಧವ್ಯ ಇದೆ. ಅದು ಗಾಂಧೀಜಿಯಿಂದ ಹಿಡಿದು ನೆಲ್ಸನ್ ಮಂಡೆಲಾ ತನಕ, ಪ್ರಸಕ್ತ ರಾಜಕೀಯ ಸಂಬಂಧವೂ ಚೆನ್ನಾಗಿಯೇ ಇದೆ. ಹಾಗೇ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಜೊತೆಗೂ ಉತ್ತಮವಾದ ಸಂಬಂಧವಿದೆ. ಐಸಿಸಿ ಅಂಗಣದಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಬೆಂಬಲವಾಗಿ ನಿಲ್ಲುತ್ತದೆ. ಹಾಗೇ ನೋಡಿದ್ರೆ, ಇವತ್ತು ಬಿಸಿಸಿಐ ಕುಬೇರನಾಗಿ ಮೆರೆಯುತಿರುವುದಕ್ಕೆ ಪ್ರಮುಖ ಕಾರಣ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ಆಲಿ ಬಾಚರ್. 1991ರ ದಕ್ಷಿಣ ಆಫ್ರಿಕಾ ಸರಣಿಯ ವೇಳೆ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರದಿಂದ ದುಡ್ಡು ಮಾಡಬಹುದು ಎಂಬುದನ್ನು ಮೊದಲು ಹೇಳಿಕೊಟ್ಟಿದ್ದೇ ಆಲಿ ಬಾಚರ್. ಆಗಿನ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಬಳಿ ನೇರ ಪ್ರಸಾರದ ಹಕ್ಕನ್ನು ಮಾರಾಟ ಮಾಡುವಂತೆ ಸಲಹೆ ನೀಡಿದ್ದು ಸಹ ಆಲಿ ಬಾಚರ್. ದೂರದರ್ಶನಕ್ಕೆ ಉಚಿತವಾಗಿ ನೇರ ಪ್ರಸಾರದ ಹಕ್ಕನ್ನು ನೀಡುತ್ತಿದ್ದೇವೆ ಎಂದ ದಾಲ್ಮಿಯಗೆ ನೇರಪ್ರಸಾರದಿಂದ ದುಡ್ಡು ಹರಿದು ಬರುತ್ತೆ ಎಂಬುದರ ರಹಸ್ಯವನ್ನು ತಿಳಿಸಿಕೊಟ್ಟಿದ್ದಲ್ಲದೆ ಅದಕ್ಕೊಂದು ಮಾಸ್ಟರ್ ಪ್ಲ್ಯಾನ್ ಕೂಡ ಮಾಡಿಕೊಟ್ಟಿದ್ದು ಆಲಿ ಬಾಚರ್.
ಅದೇನೇ ಇರಲಿ, ದಕ್ಷಿಣ ಆಫ್ರಿಕಾದ ಕ್ರಿಕೆಟ್ ಜಗತ್ತಿನಲ್ಲಿ ಇಂದು ಹಬ್ಬದ ದಿನ. 44 ವರ್ಷಗಳ ಅಪಮಾನ. 27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆದ್ದ ಹರಿಣಗಳ ಖುಷಿಯನ್ನು ವರ್ಣಿಸಲು ಅಸಾಧ್ಯ. ಇನ್ನು ಮುಂದೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಚೋಕರ್ಸ್ ಅಲ್ಲ.. ಚಾಂಪಿಯನ್ಸ್.. ಚೋಕರ್ಸ್ ಅನ್ನೋ ಹಣೆಪಟ್ಟಿ ಕಳಚಿ ಬಿದ್ದಿದೆ. ಇನ್ನು ಮುಂದೆ ಹರಿಣಗಳ ಹವಾ ಜೋರಾಗಲಿದೆ.. ಇರಲಿ ಎಚ್ಚರ.. ಹಗುರವಾಗಿ ಪರಿಗಣಿಸಬೇಡಿ..!
ಸನತ್ ರೈ