ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್-2023 ಟೂರ್ನಿ ಇಂದಿನಿಂದ ಆರಂಭವಾಗಲಿದ್ದು, ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ಲೋಕದ ಮಹಾಸಮರ ಕಣ್ತುಂಬಿಕೊಳ್ಳಲು ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳು ಅತ್ಯಂತ ಉತ್ಸುಕರಾಗಿದ್ದಾರೆ.
ಇಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್‌ಅಪ್ ನ್ಯೂಜಿಲೆಂಡ್ ತಂಡಗಳು ಹಣಾಹಣಿ ನಡೆಸಲಿವೆ. ಉಭಯ ತಂಡಗಳ ನಡುವಿನ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ. 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಜಿದ್ದಾಜಿದ್ದಿನ ಕಾದಾಟ ನಡೆಸಿದ್ದ ಈ ಎರಡು ತಂಡಗಳು ಇಂದಿನ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡುವ ನಿರೀಕ್ಷೆ ಹೊಂದಿದ್ದು, ಇದಕ್ಕಾಗಿ ತಮ್ಮದೇ ರಣತಂತ್ರ ರೂಪಿಸಿಕೊಂಡಿವೆ.
ಮೇಲ್ನೋಟಕ್ಕೆ ಎರಡು ತಂಡಗಳು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅತ್ಯಂತ ಬಲಿಷ್ಠವಾಗಿವೆ. ಪ್ರಮುಖವಾಗಿ ಬ್ಯಾಟಿಂಗ್ ವಿಭಾಗದಲ್ಲಿ ಶ್ರೇಷ್ಠ ಆಟಗಾರರು ಉಭಯ ತಂಡಗಳ ಪ್ರಮುಖ ಅಸ್ತ್ರವಾಗಿದ್ದಾರೆ. ಇಂಗ್ಲೆಂಡ್ ಜಾನಿ ಬೈರ್ಸ್ಟೋ, ಡೇವಿಡ್ ಮಲಾನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್ ಸ್ಟೋನ್, ಮೊಯಿನ್ ಅಲಿ, ಬೆನ್ ಸ್ಟೋಕ್ಸ್ ಅವರಂತಹ ಬಲಿಷ್ಠ ಬ್ಯಾಟರ್‌ಗಳನ್ನ ಹೊಂದಿದ್ದು, ಸ್ಪೋಟಕ ಆಟವೇ ಇವರ ಪ್ರಮುಖ ಅಸ್ತ್ರವಾಗಿದೆ. ಇನ್ನೂ ಬೌಲಿಂಗ್‌ನಲ್ಲಿ ವೇಗದ ಬೌಲರ್‌ಗಳಾದ ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್ ಅವರ ಜೊತೆಗೆ ಮೊಯಿನ್ ಅಲಿ, ಆದಿಲ್ ರಶೀದ್ ಅವರುಗಳು ಚಾಣಾಕ್ಷ ಸ್ಪಿನ್ ಮೂಲಕ ಎದುರಾಳಿಗಳನ್ನ ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ.
ಇನ್ನೂ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ವಿಶ್ವಕಪ್‌ನ ಹುಡುಕಾಟ ನಡೆಸುತ್ತಿರುವ ನ್ಯೂಜಿ಼ಲೆಂಡ್ ಈ ಬಾರಿಯಾದರೂ ಕನಸನ್ನ ನನಸು ಮಾಡಿಕೊಳ್ಳುವ ನಿರೀಕ್ಷೆ ಹೊಂದಿದೆ. ಇದಕ್ಕಾಗಿ ಬಲಿಷ್ಠ ಆಟಗಾರರ ಪಡೆಯೊಂದಿಗೆ ಆಗಮಿಸಿರುವ ಕಿವೀಸ್, ಡೆವೋನ್ ಕಾನ್ವೆ, ಕೇನ್ ವಿಲಿಯಂಸನ್, ವಿಲ್ ಯಂಗ್, ಡೇರಿಲ್ ಮಿಚೆಲ್, ಟಾಮ್ ಲಾಥಮ್, ಗ್ಲೇನ್ ಫಿಲಿಫ್ಸ್, ರಚಿನ್ ರವೀಂದ್ರ, ಜೇಮ್ಸ್ ನಿಶಾಮ್ ಅವರಂತಹ ಶ್ರೇಷ್ಠ ಬ್ಯಾಟರ್‌ಗಳನ್ನ ಹೊಂದಿದೆ. ಇವರೊಂದಿಗೆ ಬೌಲಿಂಗ್‌ನಲ್ಲಿ ಅನುಭವಿ ಟಿಮ್ ಸೌಥಿ, ಟ್ರೆಂಟ್ ಬೋಲ್ಟ್, ಲಾಕಿ ಫರ್ಗ್ಯೂಸನ್, ಮ್ಯಾಟ್ ಹೆನ್ರಿ ಅವರೊಂದಿಗೆ ಸ್ಪಿನ್ನರ್‌ಗಳಾದ ಇಶ್ ಸೋಧಿ, ಮಿಚೆಲ್ ಸ್ಯಾಂಟ್ನರ್ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ.
ತಂಡಗಳ ಮುಖಾಮುಖಿ:
ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಒಟ್ಟು 95 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಇಂಗ್ಲೆಂಡ್ 45 ಹಾಗೂ ನ್ಯೂಜಿ಼ಲೆಂಡ್ 44 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಸಮಬಲದ ಹೋರಾಟ ನಡೆಸಿದ್ದು, 4 ಪಂದ್ಯಗಳು ಫಲಿತಾಂಶ ಕಾಣದೆ ರದ್ದುಗೊಂಡಿವೆ. ಇನ್ನೂ ಏಕದಿನ ವಿಶ್ವಕಪ್‌ನಲ್ಲಿ ಎರಡು ತಂಡಗಳು 10 ಬಾರಿ ಮುಖಾಮುಖಿ ಆಗಿದ್ದು, ತಲಾ 5 ಬಾರಿ ಗೆದ್ದಿವೆ.
ಕೇನ್-ಸ್ಟೋಕ್ಸ್ ಅನುಪಸ್ಥಿತಿ:
ಏಕದಿನ ವಿಶ್ವಕಪ್‌ನ ಮೊದಲ ಪಂದ್ಯಕ್ಕಾಗಿ ಸಜ್ಜಾಗಿರುವ ಕಿವೀಸ್ ಹಾಗೂ ಇಂಗ್ಲೆಂಡ್‌ಗೆ ಸ್ಟಾರ್ ಆಟಗಾರರ ಅನುಪಸ್ಥಿತಿ ಎದುರಾಗಿದೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ನ್ಯೂಜಿ಼ಲೆಂಡ್‌ನ ಕೇನ್ ವಿಲಿಯಂಸನ್ ಈ ಪಂದ್ಯಕ್ಕೆ ಅಲಭ್ಯರಾಗಿದ್ದರೆ. ಇವರ ಜೊತೆಗೆ ಅನುಭವಿ ವೇಗದ ಬೌಲರ್ ಟಿಮ್ ಸೌಥಿ ಸಹ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್ ಪರ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೂಡ ಗಾಯದ ಸಮಸ್ಯೆ ಕಾರಣ ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಇಂಗ್ಲೆಂಡ್ ತಂಡ:
ಜಾಸ್ ಬಟ್ಲರ್(ನಾಯಕ), ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್ಸ್ಟೋವ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್.
ನ್ಯೂಜಿಲೆಂಡ್ ತಂಡ:
ಕೇನ್ ವಿಲಿಯಮ್ಸನ್(ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲೊಕ್ಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲೇಥಮ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್.