ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ (Congress guarantee) ಬಗ್ಗೆಯೇ ಈಗ ಎಲ್ಲೆಡೆ ಚರ್ಚೆ ಆರಂಭವಾಗಿದೆ.
ಬಿಜೆಪಿ ನಾಯಕರು ಗ್ಯಾರಂಟಿಗಳ ಕುರಿತು ಟೀಕೆಗಳನ್ನು ಸಹ ಮಾಡುತ್ತಿದ್ದಾರೆ. ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳಿಂದ ರಾಜ್ಯದ ವಾತಾವರಣವನ್ನು ಹಾಳುಮಾಡುತ್ತಿದೆ ಎಂದು ಕಿಡಕಾರಿದ್ದು, ಸದ್ಯ ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದೆ. ನಾವು ಘೋಷಿಸಿದ 5 ಗ್ಯಾರಂಟಿ ಜಾರಿಗೊಳಿಸುವುದು ನಿಶ್ಚಿತ ಎಂದು ಹೇಳುವ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟಿದೆ.
ಚುನಾವಣೆಯಲ್ಲಿ ಹೀನಾಯ ಸೋಲಿನ ಹೊಣೆ ಹೊತ್ತು ರಾಜೀನಾಮೆ ಕೊಡುವವರು ಬಿಜೆಪಿಯಲ್ಲಿ ಯಾರೂ ಇಲ್ಲವೆ? ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಹೊಣೆ ಯಾರದ್ದು? ಅಮಿತ್ ಶಾ ಅವರದ್ದೋ? ಬಸವರಾಜ ಬೊಮ್ಮಾಯಿ ಅವರದ್ದೋ? ನರೇಂದ್ರ ಮೋದಿಯವರದ್ದೋ? ನಳಿನ್ ಕುಮಾರ್ ಕಟೀಲುರದ್ದೋ? ಬಿಜೆಪಿ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡುವವರು ಯಾರು ಎಂದು ಬಿಜೆಪಿಗೆ ಕಾಂಗ್ರೆಸ್ ಸಾಲು ಸಾಲು ಪ್ರಶ್ನೆ ಹಾಕಿದೆ.
ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಬಿಜೆಪಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳು ರಾಜ್ಯದ ವಾತಾವರಣವನ್ನು ಹಾಳುಮಾಡುತ್ತಿದೆ. ಜನರು ಗ್ಯಾರಂಟಿಗಳಿಗೆ ಕಾಯುತ್ತಿದ್ದರೆ, ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ದೆಹಲಿ ಸುತ್ತುತ್ತಿದ್ದಾರೆ. ರಾಜ್ಯದಲ್ಲಿ ನಿತ್ಯ ನಿರಂತರ ಜರುಗುತ್ತಿರುವ ಇಂತಹ ಹಲವಾರು ಘಟನೆಗಳಿಗೆ ಸಿದ್ಧರಾಮಯ್ಯ ಅವರ ನೇತೃತ್ವದ ಎಟಿಎಂ ಸರ್ಕಾರ (#ATMSarkara) ವೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಇನ್ನೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ರಾಜ್ಯದ ಜನತೆಗೆ ಭರವಸೆ ನೀಡಿದ್ದನ್ನು ಈಡೇರಿಸಲೇಬೇಕು. ನನ್ನ ಅಸ್ತಿತ್ವವನ್ನೇ ಬುಡಮೇಲು ಮಾಡಿದ ಈ ಕಾಂಗ್ರೆಸ್, ತಾನು ಕೊಟ್ಟ ಮಾತು ಉಳಿಸಿಕೊಳ್ಳುವವರಿಗೂ ಬಿಡುವುದಿಲ್ಲ. ಯಾವುದೇ ಕಂಡೀಷನ್ ಕೂಡ ಹಾಕುವಂತಿಲ್ಲ ಎಂದು ಕಿಡಿಕಾರಿದ್ದಾರೆ.