ಚೆನ್ನೈನಲ್ಲಿ ಜೂನ್ 30ರವರೆಗೆ ಮತ್ತೊಮ್ಮೆ ಸಂಪೂರ್ಣ ಲಾಕ್ ಡೌನ್
ಚೆನ್ನೈ, ಜೂನ್ 15: ತಮಿಳುನಾಡಿನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಗಮನಾರ್ಹ ಪ್ರಮಾಣದಲ್ಲಿ ಏರಿಕೆ ಕಂಡಿರುವ ಹಿನ್ನಲೆಯಲ್ಲಿ ಸಿಎಂ ಪಳನಿಸ್ವಾಮಿ ರಾಜಧಾನಿ ಚೆನ್ನೈ ಸೇರಿದಂತೆ ಒಟ್ಟು ನಾಲ್ಕು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಿಸಿದ್ದಾರೆ.
ತಮಿಳುನಾಡಿನಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿದ್ದು, ಎಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕೊರೊನಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದರೂ ಹತೋಟಿಗೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಚೆನ್ನೈ ಸೇರಿದಂತೆ ಕಂಚೀಪುರಂ, ಚಂಗಲ್ ಪಟ್ಟು, ತಿರುವಳ್ಳೂರು ಜಿಲ್ಲೆಗಳಲ್ಲಿ ಜೂನ್ 19 ರಿಂದ 30 ರ ತನವರೆಗೆ ಸಂಪೂರ್ಣ ಲಾಕ್ಡೌನ್ ಘೋಷಿಸಲಾಗಿದೆ. ಅಷ್ಟೇ ಅಲ್ಲ ಗರಿಷ್ಠ ಷರತ್ತುಗಳನ್ನು ಕೂಡ ವಿಧಿಸಲಾಗಿದೆ.
ಇಂದು ಬೆಳಗ್ಗೆ ಆರೋಗ್ಯ ತಜ್ಞರ ಸಮಿತಿ ಜೊತೆ ಚರ್ಚೆ ನಡೆಸಿದ ಸಿಎಂ ಪಳನಿಸ್ವಾಮಿ ಚೆನ್ನೈ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ವೇಗವಾಗಿ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಕೊರೋನಾ ನಿಯಂತ್ರಿಸಲು ಮತ್ತೆ ಲಾಕ್ಡೌನ್ ಘೋಷಿಸುವ ನಿರ್ಧಾರ ಕೈಗೊಂಡರು.
ಭಾನುವಾರದಂದು ತಮಿಳುನಾಡಿನಲ್ಲಿ 1,974 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 44,661 ಏರಿಕೆಯಾಗಿದೆ. ಇಲ್ಲಿಯವರೆಗೆ 24,547 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದರೆ, 19,676 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಇಲ್ಲಿಯವರೆಗೆ ಕೊರೋನಾದಿಂದ ಒಟ್ಟು 435 ಮಂದಿ ಸಾವನ್ನಪ್ಪಿದ್ದಾರೆ.