ಮಂಡ್ಯ: ಕೇರಳದ (Kerala) ವಯನಾಡಿನ ಗುಡ್ಡ ಕುಸಿತದಲ್ಲಿ (Wayanad Landslides) ಬಲಿಯಾಗಿರುವ ಮಂಡ್ಯ (Mandya) ಜಿಲ್ಲೆಯ ಕೆ.ಆರ್.ಪೇಟೆ (KR Pete) ತಾಲೂಕಿನ ಕತ್ತರಘಟ್ಟ ಗ್ರಾಮದ ಅಜ್ಜಿ ಮತ್ತು ಮೊಮ್ಮಗನ ಅಂತ್ಯಕ್ರಿಯೆ ಒಂದೇ ಚಿತೆಯಲ್ಲಿ ನಡೆಯಿತು. ಅಜ್ಜಿಯೊಂದಿಗೆ ಮೊಮ್ಮಗ ಪಂಚಭೂತಗಳಲ್ಲಿ ಲೀನವಾಗುತ್ತಿರುವುದನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸೋಮವಾರ ಮಧ್ಯರಾತ್ರಿ ವಯನಾಡಿನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಕೆ.ಆರ್.ಪೇಟೆಯ ಕತ್ತರಘಟ್ಟ ಮೂಲದ ಒಂದೇ ಕುಟುಂಬದ ಅನಿಲ್, ಝಾನ್ಸಿ, ನಿಹಾಲ್, ದೇವರಾಜು, ಲೀಲಾವತಿ ಕಾಣೆಯಾಗಿದ್ದರು. ನಂತರ ಅನಿಲ್, ಝಾನ್ಸಿ, ದೇವರಾಜು ಗಾಯಾಳುಗಳ ಸ್ಥಿತಿಯಲ್ಲಿ ಸಿಕ್ಕಿದ್ದರು. ಆದರೆ, ಆದರೆ ನಿಹಾಲ್ ಮತ್ತು ಲೀಲಾವತಿ ಸಿಕ್ಕಿರಲಿಲ್ಲ.
ಗುರುವಾರ ಮಧ್ಯಾಹ್ನ ಲೀಲಾವತಿ ಹಾಗೂ ನಿಹಾಲ್ ಶವಗಳು ಮಣ್ಣಿನಡಿ ಪತ್ತೆಯಾಗಿದ್ದವು. ನಂತರ ವಯನಾಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಗುರುವಾರ ಮಧ್ಯರಾತ್ರಿ ಇವರ ಶವಗಳನ್ನು ಕತ್ತರಿಘಟ್ಟ ಗ್ರಾಮಕ್ಕೆ ತಂದು ಅಂತ್ಯಸಂಸ್ಕಾರ ನಡೆಸಲಾಯಿತು. ಗ್ರಾಮಕ್ಕೆ ಮೃತ ದೇಹ ಬರುತ್ತಿದ್ದಂತೆ ಕುಟುಂಬಸ್ಥರು, ನೆಂಟರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಜಮೀನಿನಲ್ಲಿ ಅಜ್ಜಿ, ಮೊಮ್ಮಗನನ್ನು ಒಂದೇ ಚಿತೆಯಲ್ಲಿಟ್ಟು ಅಂತ್ಯಕ್ರಿಯೆ ನೆರವೇರಿಸಲಾಯಿತು.








