ಸಿನಿಮೀಯ ರೀತಿಯಲ್ಲಿ ಹಣ ಎಗರಿಸಿ ಎಸ್ಕೇಪ್ – ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ…
ಹಾಡು ಹಗಲೇ ಸಿನಿಮೀಯ ರೀತಿಯಲ್ಲಿ ಹಣ ಎಗರಿಸಿ ಎಸ್ಕೇಪ್ ಆದ ಇಬ್ಬರು ಹೆಂಡಿರ ಮುದ್ದಿನ ಕಳ್ಳನನ್ನ ಹಿಡಿಯುವಲ್ಲಿ ಗದಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊಸಪೇಟೆ ಮೂಲದ ದಾದಾಪೀರ ಹಣ ಎಗರಿಸಿದ ಕಳ್ಳ. ಈತ ಗದಗ ನಗರದ ಹುಯಿಲಗೋಳ ನಾರಾಯಣರಾಯರ ವೃತ್ತದ ಬಳಿ ಕೆನರಾ ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದ ಶ್ರೀನಿವಾಸ ತಿರ್ಲಾಪೂರ ಎಂಬುವವರಿಂದ 3 ಲಕ್ಷ 65 ಸಾವಿರ ರೂಪಾಯಿಯನ್ನ ಕ್ಷಣ ಮಾತ್ರದಲ್ಲಿ ಎಗರಿಸಿ ಎಸ್ಕೇಪ್ ಆಗಿದ್ದ.
ಹಣ ಡ್ರಾ ಮಾಡಿಕೊಂಡು ಬಂದಿದ್ದ ಶ್ರೀನಿವಾಸ್ ಎಂಬುವವರು ಹಣವನ್ನ ಸ್ಕೂಟಿಯ ಡಿಕ್ಕಿಯಲ್ಲಿಟ್ಟು ಜ್ಯೂವೆಲರಿ ಶಾಪ್ ಗೆ ಹೋಗಿದ್ದರು. ಅತ್ತ ಅಂಗಡಿಗೆ ಹೋಗಿ ಬರೋದ್ರೊಳಗೆ ಹಣ ಮಾಯವಾಗಿತ್ತು.
ಹಣ ಕಳ್ಳತನವಾದ ತಕ್ಷಣ ಶ್ರೀನಿವಾಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಗದಗ ಶಹರ ಪೊಲಿಸ್ ಠಾಣೆಯ ಪೊಲೀಸರು ಸಿಸಿಟಿವಿ ಪರಿಶೀಲಿಸಿದ್ದಾರೆ.
ಕಳ್ಳ ದಾದಾಪೀರ ದ್ವಿಚಕ್ರ ವಾಹನದಲ್ಲಿ ಬಂದು ಹಣ ಎಗರಿಸಿ ಎಸ್ಕೇಪ್ ಆಗಿದ್ದಾನೆ. ಕಳ್ಳನ ಜಾಡು ಹಿಡಿದ ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಳ್ಳನನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಬ್ಬರು ಹೆಂಡಂದಿರಿಗಾಗಿ ತಲಾ ಒಂದೂವರೆ ಲಕ್ಷ ಮತ್ತು ತನಗಾಗಿ 65 ಸಾವಿರ ರೂಪಾಯಿ ಭಾಗ ಮಾಡಿಟ್ಟಿದ್ದ ಕಳ್ಳನನ್ನ ಹಿಡಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.
Gadag: Escaping money in a cinematic way – Rapid operation by police…








