ನಿರ್ಭಯ ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿದ್ದನ್ನು ಗಣ್ಯರು,ರಾಜಕೀಯ ನಾಯಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಮಾತನಾಡಿ, ತುಂಬ ಹಿಂದೇಯೆ ಗಲ್ಲು ಶಿಕ್ಷೆ ಆಗಬೇಕಿತ್ತು. ತಪ್ಪು ಯಾರೇ ಮಾಡಲಿ ಅವರಿಗೆ ಶಿಕ್ಷೆ ಆಗುತ್ತದೆ ಎಂದು ಜನರಿಗೆ ಗೊತ್ತಾಗಿದೆ. ಗಲ್ಲು ಶಿಕ್ಷೆ ದಿನಾಂಕವನ್ನು ಮುಂದೂಡಬಹದು. ಆದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನೂ ದೆಹಲಿ ಮಹಿಳಾ ಆಯೋಗ ಅಧ್ಯಕ್ಷೆ ಸ್ವಾತಿ ಮಲಿವಾಲ್ ಮಾತನಾಡಿ, ಇದೊಂದು ಐತಿಹಾಸಿಕ ದಿನ, 7 ವರ್ಷಗಳ ನಂತರ ನಿರ್ಭಯಾಳ ಪೋಷಕರಿಗೆ ನ್ಯಾಯ ಸಿಕ್ಕಿದೆ. ಇಂದು ನಿರ್ಭಯಾ ಆತ್ಮಕ್ಕೆ ಶಾಂತಿ ಸಿಕ್ಕಿರಬಹುದು. ಅತ್ಯಾಚಾರಿಗಳಿಗೆ ಇಂದು ದೇಶ ಸರಿಯಾದ ಬಲವಾದ ಸಂದೇಶ ನೀಡಿದೆ ಎಂದಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡಿ, ನಮಗೆ ನ್ಯಾಯ ಸಿಗಲು 7 ವರ್ಷ ಹಿಡಿಯಿತು. ಇಂತಹ ಘಟನೆ ಮತ್ತೆ ಮರುಕಳಿಸಬಾರದು ಎಂದು ನಾವು ಪ್ರತಿಜ್ಞೆಯನ್ನು ಮಾಡಬೇಕು. ಕಾನೂನುಗಳನ್ನು ನಾಶ ಮಾಡಲು ಅಪರಾಧಿಗಳು ಹೇಗೆ ಕುತಂತ್ರಗಳನ್ನು ಮಾಡುತ್ತಾರೆ ಎಂದು ನಾವೆಲ್ಲ ನೋಡಿದ್ದೇವೆ. ನಮ್ಮ ಕಾನೂನು ವ್ಯವಸ್ಥೆಯಲ್ಲಿ ಕುಂದುಕೊರತೆಗಳಿವೆ. ಅವುಗಳನ್ನು ಸರಿ ಮಾಡಬೇಕಾದ ಕೆಲಸ ಆಗಬೇಕಿದೆ ಎಂದು ಹೇಳಿದ್ದಾರೆ
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಟ್ವೀಟ್ ಮಾಡಿ, ನಮ್ಮ ನ್ಯಾಯಾಂಗ ವ್ಯವಸ್ಥೆ ಅತ್ಯಾಚಾರಿಗಳಿಗೆ ಹೊಸ ಷರಾ ಬರೆದಿದೆ. ದೇಶದ ಮಗಳು ನಿರ್ಭಯಾ ಸಾವಿಗೆ ನ್ಯಾಯ ದೊರೆತಿದೆ. ತಪ್ಪಿಗೆ ಶಿಕ್ಷೆಯಾಗುತ್ತದೆ ಎಂಬ ಸಂದೇಶ ರವಾನೆ ಆಗಿದೆ ಎಂದು ಹೇಳಿದ್ದಾರೆ.










