ಗಾಂಧೀಜಿ ದಂಡಿ ಸತ್ಯಾಗ್ರಹದ ರೀತಿ ಹೋರಾಟ : ಡಿ.ಕೆ.ಶಿವಕುಮಾರ್
ಹಾಸನ : ಗಾಂಧೀಜಿ ಅವರ ದಂಡಿ ಸತ್ಯಾಗ್ರಹದ ರೀತಿ ಮೇಕೆದಾಟು ಯೋಜನೆಗೆ ಹೋರಾಟ ಮಾಡುತ್ತಿದ್ದೇನೆ. ಒಂದು ದಿನ 18 ರಿಂದ 20 ಕಿಲೋಮೀಟರ್ ಪಾದಯಾತ್ರೆ ಮಾಡಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಮೇಕೆದಾಟಿಗೆ ಆಗ್ರಹಿಸಿ ನಡೆಯಲುರುವ ಪಾದಯಾತ್ರೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಎರಡು ಪ್ರಮುಖವಾದ ವಿಷಯ ಇಟ್ಟುಕೊಂಡು ಪ್ರವಾಸ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ರಿಪೋರ್ಟ್ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರು. ಕೇಂದ್ರ ಸರ್ಕಾರ ಅದಕ್ಕೆ ಅನುಮತಿ ನೀಡಿತ್ತು. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇದ್ದುದರಿಂದ ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಕೊಡಲಿಲ್ಲ. ಇದು ಡಬಲ್ ಇಂಜಿನ್ ಸರ್ಕಾರ. ರೈತರಿಗೆ ನ್ಯಾಯಯುತವಾದ ನೀರು ಸಿಗಬೇಕು, ಬೆಂಗಳೂರಿಗೆ ನಿಗದಿತ ನೀರು ಪೂರೈಕೆಯಾಗಬೇಕು ಎಂದು ಆಗ್ರಹಿಸಿದರು.
ಇನ್ನು ನಮ್ಮ ನೀರು ನಮ್ಮ ಹಕ್ಕು, ಕಾವೇರಿ ನಮ್ಮದು. ತಮಿಳುನಾಡಿಗೆ ಏನು ಶೇರ್ ಹೋಗಬೇಕು ಅದಕ್ಕೆ ನಮ್ಮ ತಕರಾರಿಲ್ಲ. ಕೇಂದ್ರದ ಸರ್ಕಾರದ ಮಂತ್ರಿಗಳು ಒಂದು ಮೀಟಿಂಗ್ ಮಾಡಲಿಲ್ಲ. ಇಲ್ಲಿನ ಮುಖ್ಯಮಂತ್ರಿ ಕರೆದುಕೊಂಡು ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸಬಹುದಿತ್ತು. ಪಕ್ಷಭೇದ ಮರೆತು ಜ.9 ರಿಂದ ಪಾದಯಾತ್ರೆ ಮೂಲಕ ಹೋರಾಟ ಮಾಡುತ್ತಿದ್ದೇವೆ. ಎಲ್ಲಾ ಪಕ್ಷದವರಿಗೆ, ಎಲ್ಲಾ ಸಂಘಟನೆಯವರಿಗೆ, ರೈತ ಸಂಘಟನೆಗಳು, ಕಲಾವಿದರಿಗೆ, ಚಿತ್ರರಂಗದ ಎಲ್ಲಾ ಸ್ನೇಹಿತರಿಗೂ ಆಹ್ವಾನ ಕೊಡುತ್ತಿದ್ದೇನೆ. ನೆಲ-ಜಲ ವಿಚಾರದಲ್ಲಿ ಎಲ್ಲರೂ ಪಕ್ಷಭೇದ ಮರೆತು ಹೋರಾಟ ಮಾಡಬೇಕು. ಈ ಹೋರಾಟ ಇತಿಹಾಸದ ಪುಟ ಸೇರಬೇಕು ಎಂದರು.









