ಡಬ್ಬಿಂಗ್ ಚಿತ್ರಗಳ ಪರ ಹೀಗ್ಯಾಕ್ ಹೇಳಿದ್ರು ಗೋಲ್ಡನ್ ಸ್ಟಾರ್ ಗಣೇಶ್..!
ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗಿವೆ.. ಅದ್ರಲ್ಲೂ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚಾಗ್ತಿರೋದು ಹೆಮ್ಮೆಯ ವಿಚಾರವೇ… ಆದ್ರೆ ಡಬ್ಬಿಂಗ್ ಸಿನಿಮಾಗಳ ವಿರುದ್ಧ ನಮ್ಮ ಸಿನಿಮಾರಂಗದರ ವಿರೋಧವೂ ಇದೆ.. ಆದ್ರೆ ನ್ಯಾಯಾಲಯದ ಮೆಟ್ಟಿಲೇರಿದ ಡಬ್ಬಿಂಗ್ ವಿರೋಧಿ ಬಣಕ್ಕೆ ಅಲ್ಲಿ ಹಿನ್ನೆಡೆಯಾಗಿತ್ತು.. ನಂತರ ಪರ ಭಾಷೆ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗ ತೊಡಗಿದ್ವು.. ಈ ನಡುವೆ ಕನ್ನಡದ ಸಿನಿಮಾಗಳೇ ಪರಭಾಷೆಗೆ ಡಬ್ ಆಗಿ ನೆರೆ-ಹೊರೆ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿವೆ.. ಹೀಗಾಗಿ ಈಗ ಡಬ್ಬಿಂಗ್ ಸಿನಿಮಾಗಳಿಗೆ ವಿರೋಧ ವ್ಯಕ್ತವಾಗ್ತಿಲ್ಲ.. ಇದೀಗ ಪುಷ್ಪ ಅಂತಹ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗ್ತಿವೆ.. ಮುಂದೆ ರಾಜಮೌಳಿ ಅವರ RRR ಸಿನಿಮಾ ಕನ್ನಡದಲ್ಲಿಯೇ ರಿಲೀಸ್ ಗೆ ರೆಡಿಯಾಗಿದೆ.. ಈ ನಡುವೆ ಮತ್ತೆ ಡಬ್ಬಿಂಗ್ ಚರ್ಚೆ ಆರಂಭವಾಗಿದೆ.
ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅವರು ಈ ಬಗ್ಗೆ ಧ್ವನಿ ಎತ್ತಿದ್ದು, ‘ಪರಭಾಷೆಯ ಬಿಗ್ ಬಜೆಟ್ ಸಿನಿಮಾಗಳು ಕನ್ನಡ ಸಿನಿಮಾ ಮಾರುಕಟ್ಟೆ ಮೇಲೆ ದಾಳಿ ಮಾಡುವುದನ್ನು ಸರ್ಕಾರ, ಚಿತ್ರರಂಗದ ಹಿರಿಯರು ತಡೆಯಬೇಕಿದೆ. ಪರಭಾಷೆ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬೇಕಿದ್ದರೆ ಇಲ್ಲಿ ಬಿಡುಗಡೆ ಆಗಲಿ. ಆದರೆ ಪರಭಾಷೆಯ ಸಿನಿಮಾಗಳು ಅವುಗಳ ಮೂಲ ಭಾಷೆಯಲ್ಲಿಯೇ ಬಿಡುಗಡೆ ಆಗುವುದಕ್ಕೆ ನನ್ನ ವಿರೋಧವಿದೆ. ಮೂಲ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆದ ತಿಂಗಳ ಬಳಿಕ ಬೇಕಾದರೆ ಕರ್ನಾಟಕದಲ್ಲಿ ಬಿಡುಗಡೆ ಆಗಲಿ’ ಎಂದಿದ್ದಾರೆ.
ಅಲ್ಲದೇ ‘ಪರಭಾಷೆಯ 150-200 ಕೋಟಿ ಸಿನಿಮಾಗಳು ಬಂದಾಗೆಲ್ಲ ನಮ್ಮ ಸಿನಿಮಾಗಳು ಕಷ್ಟ ಅನುಭವಿಸುತ್ತವೆ. ಇದು ಕಳೆದ 10-12 ವರ್ಷಗಳಿಂದಲೂ ಹೀಗೆಯೇ ನಡೆಯುತ್ತಾ ಬರುತ್ತಿದೆ. ಈ ವಿಷಯದಲ್ಲಿ ಸರ್ಕಾರ ನಮಗೆ ಸಂಪೂರ್ಣ ಬೆಂಬಲ ಕೊಡಬೇಕು. ಅವರು ಕನ್ನಡ ಭಾಷೆಗೆ ಡಬ್ ಮಾಡಿ ಬೇಕಾದರೆ ಸಿನಿಮಾ ಬಿಡುಗಡೆ ಮಾಡಲಿ. ಅದಕ್ಕೆ ವೈಯಕ್ತಿಕವಾಗಿ ನನ್ನ ಅಭ್ಯಂತರವಿಲ್ಲ. ಆ ರೀತಿಯಾಗಿ ಕನ್ನಡ ಭಾಷೆಗೆ ಒತ್ತು ನೀಡುವ ಪ್ರಯತ್ನ ಆಗಲಿ. ಆದರೆ ಮೂಲ ಭಾಷೆಯಲ್ಲಿ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುವುದು ಬೇಡ’ ಎಂದಿದ್ದಾರೆ..
‘ಅಂತಿಮವಾಗಿ ಇದೆಲ್ಲ ವಾಣಿಜ್ಯ ಲೆಕ್ಕಾಚಾರವಷ್ಟೆ. ಅವರು ಹೆಚ್ಚು ಬಜೆಟ್ ಹಾಕುತ್ತಾರೆ, ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಾರೆ. ಸತ್ಯ ಹೇಳಬೇಕೆಂದರೆ, ನಾವು ಅವರಿಗೆ ಸ್ಪರ್ಧೆ ಒಡ್ಡುವ ರೀತಿಯಲ್ಲಿ ಸಿನಿಮಾ ಮಾಡಬೇಕು. ಬೇರೆಯವರ ಮೇಲೆ ದೂರು ಹೇಳಿ ಪ್ರಯೋಜನವಿಲ್ಲ. ನಾವು ನಮ್ಮ ಸಿನಿಮಾಗಳ ಬಜೆಟ್ ಹೆಚ್ಚು ಮಾಡಿಕೊಳ್ಳಬೇಕು, ಗಲ್ಲಿ-ಗಲ್ಲಿಯಲ್ಲೂ ನಮ್ಮ ಸಿನಿಮಾಗಳನ್ನು ಪ್ರದರ್ಶನ ಮಾಡುವ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಬಜೆಟ್ ಜೊತೆಗೆ ನಮ್ಮ ಕಂಟೆಂಟ್ ಅನ್ನು ಇನ್ನಷ್ಟು ಚೆನ್ನಾಗಿ ಮಾಡಿಕೊಳ್ಳಬೇಕು’ ಎಂದಿದ್ದಾರೆ..








