ಬೆಂಗಳೂರಿನಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ – ನಾಲ್ವರು ಅರೆಸ್ಟ್
ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಂಗಳುರಿನಲ್ಲಿ ನಡೆದಿದೆ. ಮಾರ್ಚ್ 24 ರಾತ್ರಿ ಅತ್ಯಾಚಾರ ನಡೆದಿದ್ದು, ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ದೆಹಲಿ ಮೂಲದ ನಾಲ್ವರು ಕಾಮುಕರನ್ನು ಬಂಧಿಸಿದ್ದಾರೆ.
ರಜತ್, ಶಿವರಾಣ್, ದೇವ್ ಸರೋಯಿ ಹಾಗೂ ಯೋಗೇಶ್ ಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳು ರಾಷ್ಟ್ರಮಟ್ಟದ ಸ್ವಿಮ್ಮರ್ಗಳಾಗಿದ್ದು ಅಭ್ಯಾಸಕ್ಕೆಂದು ಬೆಂಗಳೂರಿನಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಸಂತ್ರಸ್ತೆ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದರು. ಡೇಟಿಂಗ್ ಆ್ಯಪ್‌ನಲ್ಲಿ ಯುವತಿಗೆ ಆರೋಪಿ ರಜತ್ ಪರಿಚಯವಾಗಿದ್ದ. ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರು ನಂಬರ್‌ಗಳನ್ನು ಶೇರ್ ಮಾಡಿಕೊಂಡು ಸಂಪರ್ಕದಲ್ಲಿದ್ದರು.
ಕಳೆದ ವಾರ ರಜತ್ ಯುವತಿಗೆ ಊಟಕ್ಕೆಂದು ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗಿದ್ದ. ಬಳಿಕ ಹತ್ತಿರದಲ್ಲಿದ್ದ ತನ್ನ ರೂಂ ಗೂ ಕರೆದುಕೊಂಡು ಹೋಗಿದ್ದಾನೆ. ರೂಂನಲ್ಲಿ ರಜತ್ ಸ್ನೇಹಿತರು ಸೇರಿ ಎಲ್ಲರು ಕುಡಿದು ಊಟ ಮಾಡಿದ್ದರು. ಕುಡಿದ ಅಮಲಿನಲ್ಲಿ ರಜತ್ ಮತ್ತು ಆತನ ಸ್ನೇಹಿತರು ಯುವತಿ ಮೇಲೆ ಒಬ್ಬರ ನಂತರ ಒಬ್ಬರು ಅತ್ಯಾಚಾರ ಎಸಗಿದ್ದಾರೆ.
ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿದ್ದಂತೆ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಪೊಲೀಸರು ಕಾರ್ಯಪ್ರವೃತ್ತರಾಗಿ ಬೆಂಗಳೂರಿನ ಉಪ್ಪಾರ್ ಪೇಟೆ ಲಾಡ್ಜ್ ಹಾಗೂ ಏರ್ಪೋರ್ಟ್ನಲ್ಲಿ ಅಡಗಿದ್ದವರನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.