ಕೊಪ್ಪಳ: ಗಂಗಾವತಿ ನಗರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸದಸ್ಯನ ಕಿಡ್ನಾಪ್ ಮಾಡಲು ವಿಫಲ ಯತ್ನ ನಡೆಸಿದ್ದ ಬಿಜೆಪಿಯಿಂದ ಕೊನೆಗೂ ಗಂಗಾವತಿ ನಗರಸಭೆ ಕೈಜಾರಿದೆ.
ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಕಾಂಗ್ರೆಸ್ ಪಾಲಾಗಿದೆ. ಹೀಗಾಗಿ ಅಧಿಕಾರ ಹಿಡಿಯಲು ಹಪಹಪಿ ಮಾಡುತ್ತಿದ್ದ ಕಮಲ ಪಾಳಯ ಕಿಡ್ನಾಪ್ ಕೆಸರಲ್ಲಿ ಕೊಚ್ಚಿ ಹೋಗಿದೆ.
ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸಂಬಂಧ ಕಳೆದ 15 ದಿನಗಳಿಂದ ಕಾಂಗ್ರೆಸ್, ಬಿಜೆಪಿ ನಡುವೆ ಭರ್ಜರಿ ಹೈಡ್ರಾಮ ನಡೆದಿತ್ತು. ಬಿಜೆಪಿಯಿಂದ ಆಯ್ಕೆಯಾದ ನಗರಭೆ ಸದಸ್ಯೆಯೊಬ್ಬರು ಕಾಂಗ್ರೆಸ್ ಜತೆ ಗುರುತಿಸಿಕೊಂಡ ಕಾರಣ ಬಿಜೆಪಿ ಪಾಳಯದಲ್ಲಿ ತಲ್ಲಣ ಸೃಷ್ಟಿಯಾಗಿತ್ತು. ಕಾಂಗ್ರೆಸ್ ಪ್ಲಾನ್‍ಗೆ ತಿರುಗೇಟು ನೀಡಲು ಬಿಜೆಪಿ, ಕಾಂಗ್ರೆಸ್ ಸದಸ್ಯನ ಮನೋಹರ ಸ್ವಾಮಿ ಎಂಬುವರನ್ನು ಕಿಡ್ನಾಪ್ ಯತ್ನ ಮಾಡಿತ್ತು. ಆತ ಕೊನೆಗೂ ಉತ್ತರ ಕನ್ನಡದ ಹಳಿಯಾಳದಲ್ಲಿ ಕಿಡ್ನಾಪರ್‍ಗಳಿಂದ ತಪ್ಪಿಸಿಕೊಂಡು ಬಂದಿದ್ದ. ಹೀಗಾಗಿ ರೌಡಿಶೀಟರ್ ಕ್ಯಾಂಪ್ ರವಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರು. ಕಿಡ್ನಾಪ್ ಕೇಸ್ ದಾಖಲಾಗುತ್ತಿದ್ದಂತೆ ಬಿಜೆಪಿ ಸದಸ್ಯರಾದ ಅಜಯ್ ಬಿಚ್ಚಾಲಿ, ನವೀನ್ ಪಾಟೀಲ್, ಪರಶುರಾಮ ಮಡ್ಟೆರ್ ಪರಾರಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಸುಲಭವಾಗಿ ಗಂಗಾವತಿ ನಗರಸಭೆಯನ್ನು ತನ್ನ ತೆಕ್ಕೆಗೆ ತೆದುಕೊಳ್ಳಲು ಯಶಸ್ವಿಯಾಗಿದೆ.
ಮ್ಯಾಜಿಕ್ ನಂಬರ್ ಗಾಗಿ ಹೈಡ್ರಾಮ..!
ಗಂಗಾವತಿ ನಗರಸಭೆಯ 35 ಸ್ಥಾನಗಳ ಪೈಕಿ ಕಾಂಗ್ರೆಸ್ 17, ಬಿಜೆಪಿ 14 ಸದಸ್ಯ ಬಲ ಹೊಂದಿದೆ. ಜೆಡಿಎಸ್ 2, ಇಬ್ಬರು ಪಕ್ಷೇತರ ಸದಸ್ಯರು ಅಯ್ಕೆಯಾಗಿದ್ದಾರೆ. ಶಾಸಕರು ಹಾಗೂ ಸಂಸದರ ಮತ ಸೇರಿಸಿದರೆ ಮ್ಯಾಜಿಕ್ ನಂಬರ್ 19 ಆಗುತ್ತದೆ. ಹೀಗಾಗಿ ಕಾಂಗ್ರೆಸ್ ಬಲವನ್ನು ಕುಗ್ಗಿಸಲು ಬಿಜೆಪಿ ಸದಸ್ಯನೊಬ್ಬನ ಕಿಡ್ನಾಪ್ ಮಾಡಲು ಮುಂದಾಗಿತ್ತು. ಆದರೆ, ಕಮಲ ಪಾಳಯದ ಕಿಡ್ನಾಪ್ ಪ್ಲಾನ್ ಯಡವಟ್ಟಾದ ಪರಿಣಾಮ ಗಂಗಾವತಿ ನಗರಸಭೆ ಬಿಜೆಪಿ ಕೈಜಾರಿದೆ.
ಬಿಜೆಪಿ ಸದಸ್ಯೆಗೆ ಒಲಿದ ಉಪಾಧ್ಯಕ್ಷ ಪಟ್ಟ
ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಪಟ್ಟ ಗಿಟ್ಟಿಸಿಕೊಳ್ಳಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿತ್ತು. ಆದರೆ, ಕಾಂಗ್ರೆಸ್, ಬಿಜೆಪಿ ಸದಸ್ಯೆ ಸುಧಾ ಅವರಿಗೆ ಉಪಾಧ್ಯಕ್ಷೆ ಸ್ಥಾನದ ಆಮಿಷವೊಡ್ಡಿದ ಕಾರಣ ಬಿಜೆಪಿ ಕಿಡ್ನಾಪ್ ತಂತ್ರದ ಮೊರೆ ಹೋಗಿತ್ತು.
ಅಂತೂ ಇಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ನಡೆದ ಗಂಗಾವತಿ ನಗರಸಭೆಗೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಮಾಲಾಶ್ರೀ ಪರ 19 ಮತಗಳು, ಬಿಜೆಪಿಯ ಜಯಶ್ರೀ ಪರ 17 ಮತಗಳು ಬಿದ್ದವು. ಪಕ್ಷೇತರ ಸದಸ್ಯ ಶರ್ಬೋಜಿರಾವ್ ತಟಸ್ಥರಾಗಿ ಉಳಿದರು. ಹೀಗಾಗಿ ಅಧ್ಯಕ್ಷ ಸ್ಥಾನವನ್ನು ತನ್ನದಾಗಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ಬೆಂಬಲದೊಂದಿಗೆ ಸುಧಾ ಸೋಮನಾಥ ನಾಮಪತ್ರ ಸಲ್ಲಿಸಿದರು. ಸುಧಾ ಪರ 20 ಮತಗಳು ಬಂದರೆ, ಬಿಜೆಪಿಯ ಹೀರಾಬಾಯಿ ಪರ 17 ಮತಗಳು ಬಂದವು. ಹೀಗಾಗಿ ಸುಧಾ ಸೋಮನಾಥ ಗೆಲುವಿನ ನಗೆ ಬೀರಿದರು.
ನಿಷೇಧಾಜ್ಞೆ ಜಾರಿ
ಗಂಗಾವತಿ ನಗರಸಭೆ ಚುನಾವಣೆ ತೀವ್ರ ಜಿದ್ದಾಜಿದ್ದನಿಂದ ಕೂಡಿದ ಪರಿಣಾಮ ಗಂಗಾವತಿಯ ತಾಪಂ ಮಂಥನ ಸಭಾಂಗಣ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ನಡೆದ ಸ್ಥಳದ ಸುತ್ತಮುತ್ತ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಬಿಜೆಪಿ ಮಡಿಲಿಗೆ ಗೋಕಾಕ್ ನಗರಸಭೆ..!
ದಶಕಗಳ ಕಾಲದಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರಸಭೆ ಪ್ರಪ್ರಥಮ ಬಾರಿಗೆ ಬಿಜೆಪಿ ಪಾಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ತಂತ್ರಗಾರಿಕೆ ಫಲಿಸಿದ್ದು, ಗೋಕಾಕ್ ನಗರಸಭೆಯ ಅಧ್ಯಕ್ಷರಾಗಿ ಸಾಮಾನ್ಯ ವರ್ಗದ ಜಯಾನಂದ ಹುಣಚ್ಯಾಳಿ ಮತ್ತು ಉಪಾಧ್ಯಕ್ಷರಾಗಿ ಪರಿಶಿಷ್ಟ ಜಾತಿಯ ಬಸವರಾಜ ಆರೆನ್ನವರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕರದಂಟು ನಗರಿ ಗೋಕಾಕ್ ನಗರಸಭೆಗೆ ಆಯ್ಕೆಯಾಗಿದ್ದ ಪಕ್ಷೇತರ ನಗರಸಭಾ ಸದಸ್ಯರು, ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬಿಜೆಪಿ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel