ಸಿಎಜಿ ಆಗಿ ನೇಮಕಗೊಂಡ ಜಿ ಸಿ ಮುರ್ಮು
ಶ್ರೀನಗರ, ಅಗಸ್ಟ್ 7: ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ, ಸರ್ಕಾರವು ಗುರುವಾರ ಜಿ ಸಿ ಮುರ್ಮು ಅವರನ್ನು ಭಾರತದ ಕಂಟ್ರೋಲರ್ ಮತ್ತು ಲೆಕ್ಕಪರಿಶೋಧಕ ಜನರಲ್ (ಸಿಎಜಿ) ಆಗಿ ನೇಮಕ ಮಾಡಿ ಆದೇಶ ಹೊರಡಿಸಿತು.
ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು ಮುರ್ಮು ಅವರನ್ನು ಸಿಎಜಿಯಾಗಿ ನೇಮಕ ಮಾಡುವ ಘೋಷಣೆಯನ್ನು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಗುರುವಾರ ತಡರಾತ್ರಿ ಬಿಡುಗಡೆ ಮಾಡಿದೆ.
ಆಡಿಟರ್ ಜನರಲ್ ರಾಜೀವ್ ಮೆಹ್ರಿಷಿ ಅವರಿಗೆ 65 ವರ್ಷ ಪೂರ್ಣಗೊಂಡ ಕಾರಣ, ಈ ವಾರ ಅವರು ನಿವೃತ್ತರಾಗಲಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ನಿವೃತ್ತರಾಗಬೇಕಿದ್ದ ಮುರ್ಮು ಅವರನ್ನು ಕಳೆದ ಅಕ್ಟೋಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಎಲ್ಜಿ ಆಗಿ ನೇಮಕ ಮಾಡಲಾಯಿತು. ಬುಧವಾರ ಅವರು ಎಲ್.ಜಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಮಾಜಿ ಕೇಂದ್ರ ಸಚಿವ ಮನೋಜ್ ಸಿನ್ಹಾ ಮುರ್ಮು ಅವರ ನಂತರ ಜಮ್ಮು ಮತ್ತು ಕಾಶ್ಮೀರ ಎಲ್.ಜಿ ಆಗಿ ನೇಮಕಗೊಂಡಿದ್ದಾರೆ.
1985 ರ ಬ್ಯಾಚ್‌ನ ಗುಜರಾತ್ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ಮುರ್ಮು ಅವರ ಅನುಷ್ಠಾನ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದರು. ಇದಕ್ಕಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಪ್ರಶಂಸೆಗೆ ಪಾತ್ರರಾಗಿದ್ದರು.