ಜೈಪುರ : ರಾಜಸ್ಥಾನದಲ್ಲಿ ಒಂದು ತಿಂಗಳ ಕಾಲ ನಡೆದ ರಾಜಕೀಯ ನಾಟಕವು ಅಂತ್ಯಗೊಂಡಿದೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಇಂದು ರಾಜಸ್ಥಾನ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಕಂಡಿದ್ದಾರೆ.
ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬಿಜೆಪಿ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಮುಂದಾಗಿತ್ತು. ಆದರೆ ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಅಧಿವೇಶನದ ಆರಂಭದಲ್ಲೇ ವಿಶ್ವಾಸ ಮತಯಾಚನೆ ನಿರ್ಣಯ ಮಂಡಿಸಿತು.
ರಾಜಸ್ಥಾನ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಲ್ ಅವರು ಸರ್ಕಾರದ ಪರ ವಿಶ್ವಾಸ ಮಂಡನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ರಾಜಸ್ಥಾನದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಶಾಸಕರ ಕುದುರೆ ವ್ಯಾಪಾರ ಮಾಡಿ ಸರ್ಕಾರ ಉರುಳಿಸಿ ತನ್ನ ಸರ್ಕಾರ ರಚನೆಗೆ ಮುಂದಾಗಿದೆ. ಮಧ್ಯ ಪ್ರದೇಶ, ಮಣಿಪುರ ಮತ್ತು ಗೋವಾದಲ್ಲಿ ಕೇಂದ್ರ ಸರ್ಕಾರ ಇದೇ ಕೆಲಸ ಮಾಡಿತ್ತು. ರಾಜಸ್ಥಾನದಲ್ಲೂ ಇದೇ ಕಾರ್ಯಕ್ಕೆ ಮುಂದಾಗಿದೆ. ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಸರ್ಕಾರವನ್ನು ಉರುಳಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಪಕ್ಷೇತರ ಶಾಸಕರೂ ಸೇರಿದಂತೆ ಕಾಂಗ್ರೆಸ್ ಒಟ್ಟು 107 ಶಾಸಕರ ಬೆಂಬಲ ಹೊಂದಿದೆ. ಅಂತೆಯೇ ಬಿಜೆಪಿ 72 ಶಾಸಕರ ಬೆಂಬಲ ಹೊಂದಿದೆ.








