ಮೈಸೂರು : ಆತ್ಮಹತ್ಯೆಗೆ ಶರಣಾಗಿದ್ದ ನಂಜನಗೂಡಿನ ಟಿಹೆಚ್‍ಒ ಅವರ ಅಂತಿಮ ದರ್ಶನ ಪಡೆಯಲು ಹೋಗಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರಿಗೆ ಮಹಿಳಾ ವೈದ್ಯೆಯೊಬ್ಬರು ಕ್ಲಾಸ್ ತೆಗೆದುಕೊಂಡಿದ್ದಾರೆ.
ನಂಜನಗೂಡಿನ ಆರೋಗ್ಯಾಧಿಕಾರಿ ನಾಗೇಂದ್ರ ನಿನ್ನೆ ಬೆಳಗ್ಗೆ ಮೈಸೂರಿನ ಆಲನಹಳ್ಳಿ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು. ಅವರು ಕಳೆದ ಒಂದು ವರ್ಷದಿಂದ ನಂಜನಗೂಡಿನಲ್ಲಿ ತಾಲೂಕು ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ನಾಗೇಂದ್ರ ಅವರ ಅಂತಿಮ ದರ್ಶನ ಪಡೆಯಲು ಸುಧಾಕರ್ ಮೈಸೂರಿಗೆ ಹೋಗಿದ್ದರು. ಈ ವೇಳೆ ವೈದ್ಯೆಯೊಬ್ಬರು, 30 ಲಕ್ಷ ಪರಿಹಾರ ಕೊಡ್ತೀರಾ? ನಾವು ವೈದ್ಯರು ನಮ್ಮ ಒಂದು ತಿಂಗಳ ಸಂಬಳ ಕೊಡುತ್ತೇವೆ. ಅದೇ ಕೋಟ್ಯಂತರ ರೂ. ಆಗುತ್ತದೆ. ನೀವು ಹೊರಟು ಹೋಗಿ ಇಲ್ಲಿಂದ ಎಂದು ಸುಧಾಕರ್ ಗೆ ತರಾಟೆ ತೆಗೆದುಕೊಂಡರು. ವೈದ್ಯೆಗೆ ಉತ್ತರಿಸಲಾಗದ ಸುಧಾಕರ್ ಅವರು ಮೂಕ ಪ್ರೇಕ್ಷಕರಂತೆ ನಿಂತುಕೊಂಡಿದ್ದರು.
ಅಲ್ಲದೆ ನಮಗೆ ಐಎಎಸ್ ಅಧಿಕಾರಿಗಳ ಹಿಡಿತದಿಂದ ತಪ್ಪಿಸಿ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಮೇಲೆ ಕ್ರಿಮಿನಲ್ ಮೊಕದಮ್ಮೆ ದಾಖಲಿಸಿ. ಅವರನ್ನು ಅಮಾನತುಗೊಳಿಸಿ ಎಂದು ಒತ್ತಾಯಿಸಿದ ವೈದ್ಯರು, ಸಿಇಒ ಅನ್ನು ಅಮಾನತು ಮಾಡಿ ಪ್ರಕರಣ ದಾಖಲಿಸದಿದ್ದರೆ, ನಾವು ಕೆಲಸಕ್ಕೆ ಬರುವುದಿಲ್ಲ ಎಂದು ಸುಧಾಕರ್ ಗೆ ಎಚ್ಚರಿಕೆ ನೀಡಿದರು.