ಪ್ರೋ ಕಬಡ್ಡಿ ಟೂರ್ನಿಯಲ್ಲಿ ಗುಜರಾತ್ ಜೈಂಟ್ಸ್ 47-28 ಅಂಕಗಳಿಂದ ಬಂಗಾಳ ವಾರಿಯರ್ಸ್ ತಂಡ ಮಣಿಸುವುದರ ಮೂಲಕ ಕೊನೆಗೂ ಗೆಲುವಿನ ಲಯ ಕಂಡು ಕೊಂಡಿದೆ.
ಆಡಿದ 9 ಪಂದ್ಯಗಳಲ್ಲಿ ಜೈಂಟ್ಸ್ 2 ಜಯ, 7 ಸೋಲು ಕಂಡಿದ್ದು 12 ಅಂಕಗಳನ್ನು ಕಲೆ ಹಾಕಿತು. ಬಂಗಾಳ ಆಡಿದ 8 ಪಂದ್ಯಗಳಲ್ಲಿ 3 ಜಯ, 3 ಸೋಲು, 2 ಡ್ರಾ ಸಾಧಿಸಿದೆ. ಜೈಂಟ್ಸ್ ಅಬ್ಬರದ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಬಂಗಾಳ ತಂತ್ರವನ್ನು ಅರಿತು ಆಡಿದ ಗುಜರಾತ್ ಶ್ರೇಷ್ಠ ಪ್ರದರ್ಶನ ನೀಡಯಲು ಯಶಸ್ವಿಯಾಯಿತು. ಮೊದಲಾವಧಿಯ 20 ನಿಮಿಷದಲ್ಲಿ ಜೈಂಟ್ಸ್ 24-13 ಅಂಕಗಳಿಂದ ಮುನ್ನಡೆ ಸಾಧಿಸಿತು. ಪಂದ್ಯದಲ್ಲಿ ದಾಳಿಯಲ್ಲಿ ಗುಜರಾತ್ 11 ಅಂಕ ಗಳಿಸಿತು. ರಕ್ಷಣಾ ವಿಭಾಗದಲ್ಲೂ ಜೈಂಟ್ಸ್ 8 ಅಂಕ ಸೇರಿಸಿತು. ಮೊದಲಾವಧಿಯಲ್ಲಿ ಬಂಗಾಳ ಎರಡು ಬಾರಿ ಅಂಗಳವನ್ನು ಖಾಲಿ ಮಾಡಿತು.
ಅಂಕಗಳ ಮುನ್ನಡೆಯನ್ನು ಗುಜರಾತ್ ಎರಡನೇ ಅವಧಿಯಲ್ಲಿ ಮುಂದುವರೆಸಲು ಯತ್ನಿಸಿತು. ಈ ಅವಧಿಯಲ್ಲಿ ಜೈಂಟ್ಸ್ 23-15ರಿಂದ ಮುನ್ನಡೆ ಸಾಧಿಸಿ ಭಾರೀ ಅಂತರದ ಗೆಲುವು ಸಾಧಿಸಿತು. ಈ ವೇಳೆಯೂ ದಾಳಿ ಹಾಗೂ ಟ್ಯಾಕಲ್ನಲ್ಲಿ ಕೂಡ ಉತ್ತಮ ಪ್ರದರ್ಶನ ತೋರಿತು.
ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 37-32 ರಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಿತು. ಹರಿಯಾಣ ಆಡಿದ 9 ಪಂದ್ಯಗಳಲ್ಲಿ 7 ಜಯ, 2 ಸೋಲು ಕಂಡಿದ್ದು, 36 ಅಂಕಗಳನ್ನು ಕಲೆ ಹಾಕಿದೆ. ಪಾಟ್ನಾ ಪೈರೇಟ್ಸ್ ಆಡಿದ 9 ಪಂದ್ಯಗಳಲ್ಲಿ 4 ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಹರಿಯಾಣ 20-14 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಪಾಟ್ನಾ ಒಂದು ಬಾರಿ ಆಲೌಟ್ ಆಯಿತು. ಎರಡನೇ ಅವಧಿಯಲ್ಲಿ ಅಬ್ಬರದ ಆಟವನ್ನು ಆಡಿದ ಪಾಟ್ನಾ ಸೋಲು ಒಪ್ಪಿಕೊಂಡಿತು. ಈ ವೇಳೆ ಸ್ಟೀಲರ್ಸ್ ಒಂದು ಬಾರಿ ಆಲೌಟ್ ಆಯಿತು.