ಕೊಪ್ಪಳ: ಗುಟ್ಕಾ ತಂದು ಕೊಡಲಿಲ್ಲ ಎಂಬ ಕಾರಣಕ್ಕೆ ಬಾಲಕಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಜಿಲ್ಲೆಯ ಇತ್ತೀಚೆಗೆ ಕಿನ್ನಾಳ ಗ್ರಾಮದಲ್ಲಿ ಚೀಲದಲ್ಲಿ ಶವವಾಗಿ ಪತ್ತೆಯಾಗಿದ್ದ ಬಾಲಕಿ ಅನುಶ್ರಿ (7) ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಪ್ರಕರಣದ ಆರೋಪಿಯನ್ನು ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು (Koppal Police) 2 ತಿಂಗಳ ನಂತರ ಬಂಧಿಸಿದ್ದಾರೆ.
ಕಿನ್ನಾಳ ಗ್ರಾಮದ ಸಿದ್ದಲಿಂಗಯ್ಯ ನಾಯ್ಕಲ್ ಹಿರೇಮಠ (51) ಬಂಧಿತ ಆರೋಪಿ. ಬಾಲಕಿ ಗುಟ್ಕಾ ತಂದು ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪಕ್ಕದ ಮನೆಯ ಸಿದ್ದಲಿಂಗಯ್ಯ ಹತ್ಯೆ ಮಾಡಿ ಸಾಕ್ಷಿ ಸಿಗದಂತೆ ಶವವನ್ನ ಗೊಬ್ಬರದ ಚೀಲದಲ್ಲಿ ಕಟ್ಟಿ ಎಸೆದಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗುಟ್ಕಾ ತಂದು ಕೊಡದಿದ್ದರಿಂದ ಆರೋಪಿ, ಬಾಲಕಿಯ ತಲೆಗೆ ಕೋಲಿನಿಂದ ಹೊಡೆದಿದ್ದಾನೆ. ತಲೆಗೆ ಜೋರಾಗಿ ಪೆಟ್ಟು ಬಿದ್ದ ಹಿನ್ನೆಲೆ ಬಾಲಕಿ ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆರೋಪಿಯು ಭಯದಲ್ಲಿ ಆಕೆಯನ್ನು ಚೀಲದಲ್ಲಿ ತುಂಬಿ ಮನೆಯ ಹಿಂದೆ ಇಟ್ಟಿದ್ದಾನೆ. ಇದರಿಂದ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಶವದ ವಾಸನೆ ಬಂದಾಗ ಆರೋಪಿ, ಚೀಲ ಇಟ್ಟಿದ್ದ ಸ್ಥಳ ಬದಲಾವಣೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಯಾವುದೇ ಸಣ್ಣ ಸುಳಿವೂ ಇಲ್ಲದ ಈ ಪ್ರಕರಣದಲ್ಲಿ 2 ತಿಂಗಳ ಬಳಿಕ ಕೊಪ್ಪಳ ಪೊಲೀಸರು ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.