ಅದು ನನ್ನ ಅಮ್ಮನ ನೆನಪು : ಪ್ಲೀಸ್ ಫೋನ್ ವಾಪಸ್ ಕೊಡಿ
ಮಡಿಕೇರಿ : ನಿರ್ದಹಿ ಕೊರೊನಾ ಸೋಂಕು ಎಷ್ಟೋ ಮಕ್ಕಳನ್ನ ಅನಾಥವಾಗಿಸಿದೆ. ಕೊರೊನಾದಿಂದಾಗಿ ಅದೆಷ್ಟೋ ಮಕ್ಕಳು ತಂದೆ ತಾಯಿಯನ್ನ ಕಳೆದುಕೊಂಡಿದ್ದಾರೆ.
ಅದರಂತೆ ಕೊರೊನಾ ಸೋಂಕಿನಿಂದ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ಪುಟ್ಟ ಬಾಲಕಿಯೊಬ್ಬಳು ತನ್ನ ತಾಯಿಯ ಮೊಬೈಲ್ ವಾಪಸ್ ಕೊಡಿಸುವಂತೆ ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಪತ್ರ ಬರೆದಿದ್ದಾಳೆ.
ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯ ನಿವಾಸಿ ನವೀನ್ ಅವರ ಮಗಳು ಹೃತೀಕ್ಷಾ ಹೀಗೆ ಪತ್ರ ಬರೆದಿರುವ ಪುಟ್ಟ ಬಾಲಕಿಯಾಗಿದ್ದಾಳೆ.
ಮೇ 6 ರಂದು ಬಾಲಕಿ ಹೃತೀಕ್ಷಾ ಈಕೆಯ ತಾಯಿ ಪ್ರಭಾ ಮತ್ತು ತಂದೆ ನವೀನ್ ಮೂವರಿಗೂ ಕೊರೊನಾ ಸೋಂಕು ತಗುಲಿತ್ತು. ಹೃತೀಕ್ಷಾ ಮತ್ತು ನವೀನ್ ಇಬ್ಬರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು.
ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ತಾಯಿ ಪ್ರಭಾ ಅವರನ್ನು ಮಡಿಕೇರಿ ಕೊರೊನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪ್ರಭಾ ಅವರಿಗೆ ಚಿಕಿತ್ಸೆ ಫಲಿಸದೆ ಮೇ 16ರಂದು ಮೃತಪಟ್ಟಿದ್ದರು.
ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ತನ್ನ ತಾಯಿಯ ಮೃತದೇಹವನ್ನು ಹಿಂದಿರುಗಿಸಿದ್ರೂ ಅವರೊಂದಿಗೆ ಇದ್ದ ಫೋನ್ ಅನ್ನು ಹಿಂದಿರುಗಿಸಿಲ್ಲ.
ಹೀಗಾಗಿ ಆ ಫೋನ್ ನಲ್ಲಿ ನನ್ನ ತಾಯಿಯ ನೆನಪುಗಳಿವೆ. ತನ್ನ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ನನಗೆ ಆ ಫೋನ್ ಅನ್ನು ಹಿಂದಿರುಗಿಸಿ ನನ್ನ ತಾಯಿಯ ನೆನಪುಗಳನ್ನು ಉಳಿಸಿ ಕೊಡಿ ಎಂದು ಬಾಲಕಿ ಹೃತೀಕ್ಷಾ ಕೊಡಗು ಜಿಲ್ಲಾಧಿಕಾರಿ, ಶಾಸಕರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಕರುಳು ಹಿಂಡುವಂತೆ ಪತ್ರ ಬರೆದಿದ್ದಾಳೆ.