ಜ್ಞಾನವಾಪಿ ಮಸೀದಿಯ ಒಳಗೆ ವಿಡಿಯೊ ಸಮೀಕ್ಷೆಗಾಗಿ ನೇಮಿಸಲಾಗಿದ್ದ ನ್ಯಾಯಾಲಯ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ಅವರನ್ನು ವಜಾಗೊಳಿಸಲಾಗಿದೆ.. ವಾರಾಣಸಿ ನ್ಯಾಯಾಲಯವು ಅವರನ್ನ ವಜಾಗೊಳಿಸಿ ಆದೇಶ ಹೊರಡಿಸಿದೆ..
ಸಮೀಕ್ಷೆಯ ವಿವರಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ, ಅವರ ವಿರುದ್ಧ ನ್ಯಾಯಾಲಯವು ಕಠಿಣ ಕ್ರಮ ತೆಗೆದುಕೊಂಡಿದೆ. ಇದೇ ವೇಳೆ ಸಮೀಕ್ಷೆಯ ವರದಿಯನ್ನು ಸಲ್ಲಿಸಲು ಆಯೋಗಕ್ಕೆ ಇನ್ನೂ 2 ದಿನ ಕಾಲಾವಕಾಶ ನೀಡಿದೆ.
ವಿಡಿಯೊ ಸಮೀಕ್ಷೆಯ ವರದಿಯನ್ನು ಮಂಗಳವಾರ ಸಲ್ಲಿಸಬೇಕು ಎಂದು ವಾರಾಣಸಿ ನ್ಯಾಯಾಲಯವು ಈ ಹಿಂದೆ ಸೂಚಿಸಿತ್ತು. ಆದರೆ ವರದಿ ಸಲ್ಲಿಕೆಗೂ ಮುನ್ನವೇ, ಮಸೀದಿಯ ಒಳಭಾಗದ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಕೆಲವು ಹಿಂದೂ ವಕೀಲರು ಸೋಮವಾರವೇ ಹೇಳಿದ್ದರು. ಈ ಬಗ್ಗೆ ವಾರಾಣಸಿ ನ್ಯಾಯಾಲಯವು ಮಂಗಳವಾರದ ವಿಚಾರಣೆ ವೇಳೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.