ದೊಡ್ಡಬಳ್ಳಾಪುರ : ವ್ಯಕ್ತಿಯೊಬ್ಬ ದನಳ ಮೈ ತೊಳೆಯಲು ಹೋಗಿದ್ದ ಸಂದರ್ಭದಲ್ಲಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ಒಡೇರಹಳ್ಳಿ ಹತ್ತಿರದ ಜಾಲಿಕಟ್ಟೆಯಲ್ಲಿ ನಡೆದಿದೆ.
ಪಕ್ಕದ ರಾಮಪುರ ಗ್ರಾಮದ ಕುಮಾರ್ (44) ಸಾವನ್ನಪ್ಪಿದ ದುರ್ದೈವ ರೈತ ಎನ್ನಲಾಗಿದೆ. ಒಡೇರಹಳ್ಳಿ ಹತ್ತಿರ ಜಾಲಿಕಟ್ಟೆಯಲ್ಲಿ ದನಗಳ ಮೈ ತೊಳೆಯಲು ರೈತ ನೀರಿಗೆ ಇಳಿದಿದ್ದರು. ಈ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆ ನಂತರ ದನಗಳು ಮನೆಗೆ ಹಿಂದಿರುಗಿವೆ. ಆದರೆ, ಕುಮಾರ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಎಂ.ಆರ್. ಹರೀಶ್ ನೇತೃತ್ವದಲ್ಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿ, ಶವವನ್ನು ಹೊರ ತೆಗೆದಿದ್ದಾರೆ. ಮೃತ ವ್ಯಕ್ತಿಗೆ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಪತ್ನಿ 6 ತಿಂಗಳ ಗರ್ಭಿಣಿಯಾಗಿದ್ದರು. ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.