ಮಂಡ್ಯ: ದೇಶದಲ್ಲಿ ಲೋಕಸಭಾ ಚುನಾವಣೆ ಕಣ ರಂಗೇರಿದ್ದು, ಈಗಿನಿಂದಲೇ ತಯಾರಿ ನಡೆಯುತ್ತಿದೆ. ಅದರಲ್ಲಿಯೂ ಮಂಡ್ಯದಲ್ಲಂತೂ ರಾಜಕೀಯದ್ದೇ ಚರ್ಚೆ ಎನ್ನುವಂತಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಮಂಡ್ಯದಲ್ಲಿ ಸುಮಲತಾ ಅವರ ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಈ ಮಧ್ಯೆ ಅವರಿಗೆ ಶಕ್ತಿ ದೇವಿಯಿಂದ ಶುಭ ಸೂಚನೆ ಸಿಕ್ಕಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಕಾರ್ಯಕರ್ತರ ಸಭೆ ನಡೆಸುತ್ತಿರುವ ಸುಮಲತಾ ಅವರು ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ನಿಮಿಷಾಂಬ ದೇಗುಲದಲ್ಲಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದೇವಿಯ ಬಲಭಾಗದಿಂದ ಹೂ ಕೆಳಗೆ ಬಿದ್ದಿದ್ದು, ಇದು ಶುಭ ಸಂಕೇತ ಎನ್ನಲಾಗಿದೆ.
ದೇವಿ ಬಲಗಡೆ ಹೂ ನೀಡಿದರೆ, ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಒಳಿತಾಗಬಹುದು ಎಂಬ ಚರ್ಚೆ ನಡೆಯುತ್ತಿದೆ. ದೇವಿಯ ಶುಭ ಸೂಚನೆಯಿಂದ ಸುಮಲತಾ ಸಂತಸಗೊಂಡಿದ್ದಾರೆ. ದೇವಿಯ ದರ್ಶನ ಪಡೆದರೆ ನನಗೆ ಶಕ್ತಿ ಬಂದಂತಾಗುತ್ತದೆ. ನಾನು ನನ್ನ ಬಗ್ಗೆ ಕೇಳಿಕೊಳ್ಳುವುದಿಲ್ಲ. ಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸುತ್ತೇನೆ. ಇಂದು ದೇವಿ ಆಶೀರ್ವಾದ ಮಾಡಿದ್ದಾಳೆ ಎಂದು ಸುಮಲತಾ ಹೇಳಿದ್ದಾರೆ.