ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಫೈನಲ್ ನಿಂದ ಅನರ್ಹಗೊಂಡು ಪದಕದಿಂದ ವಂಚಿತರಾಗಿದ್ದ ಭಾರತದ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ (Vinesh Phogat) ಅವರು ಭಾರತಕ್ಕೆ ಮರಳಿದ್ದಾರೆ. ಈ ವೇಳೆ ಅವರಿಗೆ ಚಿನ್ನದ ಪದಕ ಹಾಕಿ ಸಂಭ್ರಮಿಸಲಾಗಿದೆ.
ಭಾರತಕ್ಕೆ ಮರಳಿದ ಫೋಗಟ್ ಗೆ ದೆಹಲಿಯ ವಿಮಾನ ನಿಲ್ದಾಣದಲ್ಲಿ (Delhi Airport) ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿತು. ಅಭಿಮಾನಿಗಳನ್ನು ನೋಡಿ ಫೋಗಟ್ ಕಣ್ಣೀರು ಹಾಕಿದರು. ಕಾಂಗ್ರೆಸ್ ಸಂಸದ ದೀಪಿಂದರ್ ಹೂಡಾ, ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸಂತೈಸಿದರು. ನಂತರ ತೆರೆದ ವಾಹನದಲ್ಲಿ ತಮ್ಮ ಸ್ವಗ್ರಾಮಕ್ಕೆ ಮೆರವಣಿಗೆ ಮೂಲಕ ತೆರಳಿದರು.
ದೆಹಲಿಯಿಂದ ಬಾಳಲಿಗೆ ಹೋಗುವ ಮಾರ್ಗದಲ್ಲಿ, ಹಲವಾರು ಗ್ರಾಮಗಳಲ್ಲಿ ವಿನೇಶ್ ಬೆಂಬಲಿಗರು ಅವರನ್ನ ಸನ್ಮಾನಿಸಿದರು. 135 ಕಿಮೀ ದೂರದ ಪ್ರಯಾಣವು ಸುಮಾರು 13 ಗಂಟೆಗಳ ಕಾಲ ನಡೆಯಿತು. ಅವರ ಹುಟ್ಟೂರು ಬಾಳಲಿಯಲ್ಲಿ ಸಮುದಾಯದ ಹಿರಿಯರು ಚಿನ್ನದ ಪದಕ ನೀಡಿ ಗೌರವಿಸಿದರು.
100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕೆ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್ನಿಂದ ಅನರ್ಹಗೊಳಿಸಲಾಗಿತ್ತು. ಕ್ರೀಡಾಕೂಟದ ಸಂದರ್ಭದಲ್ಲಿ ವಿವಾದ ಪರಿಹಾರಕ್ಕಾಗಿ ವಿಶೇಷವಾಗಿ ಸ್ಥಾಪಿಸಲಾಗಿರುವ ಸಿಎಎಸ್ನ ತಾತ್ಕಾಲಿಕ ವಿಭಾಗಕ್ಕೆ ಪ್ರಶ್ನಿಸಿ ವಿನೇಶ್ ಆ.9 ರಂದು ಮೇಲ್ಮನವಿ ಸಲ್ಲಿಸಿದ್ದರು. ಅಲ್ಲಿಯೂ ಅವರ ಅರ್ಜಿ ವಜಾಗೊಂಡಿತ್ತು.
ವಿನೇಶ್ ಎರಡು ಬಾರಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ, ಏಷ್ಯನ್ ಗೇಮ್ಸ್ ಚಾಂಪಿಯನ್ ಮತ್ತು 8 ಏಷ್ಯನ್ ಚಾಂಪಿಯನ್ ಶಿಪ್ ಪದಕ ಗೆದ್ದ ಸಾಧನೆ ಮಾಡಿದ್ದಾರೆ.








