ಚಿನ್ನ ಕಳ್ಳಸಾಗಣೆ – ಸ್ವಪ್ನ ಸುರೇಶ್ ಹಾಗೂ ಸಂದೀಪ್ ಗೆ ನ್ಯಾಯಾಂಗ ಬಂಧನ
ಕೊಚ್ಚಿ, ಜುಲೈ 13: ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಹಾಗೂ ಸಂದೀಪ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೇರಳದ ತಿರುನಂತಪುರ ವಿಮಾನ ನಿಲ್ದಾಣದಲ್ಲಿ ಕಳೆದ ಶನಿವಾರ ಅಕ್ರಮವಾಗಿ ಸಾಗಿಸುತ್ತಿದ್ದ 15 ಕೋಟಿ ಬೆಲೆಯ 30 ಕೆ.ಜಿ. ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ಪ್ರಕರಣದಲ್ಲಿ ಸ್ವಪ್ನ ಸುರೇಶ್ ಮತ್ತು ಸಂದೀಪ್ ಅವರ ಹೆಸರು ಕೇಳಿಬಂದಿತ್ತು.
ಚಿನ್ನ ಕಳ್ಳಸಾಗಣೆ ಕೇಸಿನ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಹಾಗೂ ಸಂದೀಪ್ ಅವರು ಪ್ರಕರಣ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದು, ಎರ್ನಾಕುಲಂನಲ್ಲಿ ತಮ್ಮ ಲಾಯರ್ ಅನ್ನು ಭೇಟಿಯಾಗಿದ್ದರು. ಬಳಿಕ ಬೆಂಗಳೂರಿನ ಕೋರಮಂಗಲದಲ್ಲಿ ಅಡಗಿದ್ದು ವಿದೇಶಕ್ಕೆ ಪರಾರಿಯಾಗುವ ಯೋಜನೆ ಹಾಕಿಕೊಂಡಿದ್ದರು.
ಶನಿವಾರ ಅವರನ್ನು ಕೋರಮಂಗಲದಲ್ಲಿ ಬಂಧಿಸಲಾಗಿದ್ದು, ಭಾನುವಾರ ಕೊಚ್ಚಿಯಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಎನ್‌ಐಎ ಕೋರ್ಟ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದು, ನ್ಯಾಯಾಂಗ ಬಂಧನಕ್ಕೂ ಮೊದಲು ಕೊರೊನಾ ಪರೀಕ್ಷೆ ಕಡ್ಡಾಯ ಎಂದು ಹೇಳಿದೆ.