ಜೆಡಿಎಸ್ ಬಿಟ್ಟ ಮೇಲೆ ಸಿದ್ದರಾಮಯ್ಯಗೆ ಒಳ್ಳೇದಾಗಿದೆ : ಡಾ.ಯತೀಂದ್ರ
ಯಾದಗಿರಿ : ಜೆಡಿಎಸ್‍ನಿಂದ ಹೊರಬಂದ ಮೇಲೆ ತಮ್ಮ ತಂದೆ ಸಿದ್ದರಾಮಯ್ಯ ಅವರಿಗೆ ತುಂಬಾ ಒಳ್ಳೆಯದೇ ಆಗಿದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಪಾಪದ ಕೊಡ ತುಂಬಿದೆ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದ ಡಾ.ಯತೀಂದ್ರ, ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದಂತೆ ಸಿದ್ದರಾಮಯ್ಯನವರು ಪಾಪ ಮಾಡಿಲ್ಲ, ಪಾಪದ ಕೊಡ ತುಂಬಿಲ್ಲ.
ತಮ್ಮ ತಂದೆ ಯಾವುದೇ ಪಾಪ ಮಾಡಿಲ್ಲ, ಸಿದ್ದರಾಮಯ್ಯ ತಾವಾಗಿ ಜೆಡಿಎಸ್ ಪಕ್ಷ ಬಿಡಲಿಲ್ಲ. ಜೆಡಿಎಸ್‍ನಲ್ಲಿ ಬೆಳೆಯುತ್ತಿದ್ದ ನಾಯಕರನ್ನು ಮೊಟಕುಗೊಳಿಸಲು ಉಚ್ಚಾಟನೆ ಮಾಡಲಾಯ್ತು.
ಜೆಡಿಎಸ್‍ನಿಂದ ಹೊರಬಂದ ಮೇಲೆ ತಮ್ಮ ತಂದೆ ಸಿದ್ದರಾಮಯ್ಯ ಅವರಿಗೆ ತುಂಬಾ ಒಳ್ಳೆಯದೇ ಆಗಿದೆ. ಸಿಎಂ ಆದರು, ಈಗಲೂ ಒಳ್ಳೆಯದೇ ಆಗುತ್ತಿದೆ. ಜೆಡಿಎಸ್ ಪಕ್ಷ ತನ್ನ ನೆಲೆ ಕಳೆದುಕೊಳ್ಳಲಿದೆ ಎಂದು ತಿರುಗೇಟು ನೀಡಿದರು.
ಇನ್ನು ಮುಂದಿನ ವಿಧಾನಸಭೆ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಎದುರಿಸಲಿದ್ದು ಅಧಿಕಾರಕ್ಕೆ ಬರುತ್ತದೆ ಎನ್ನುವ ವಿಶ್ವಾಸವನ್ನು ಕೂಡ ಯತೀಂದ್ರ ವ್ಯಕ್ತಪಡಿಸಿದ್ದಾರೆ.










