ಔರಂಗಾಬಾದ್ : ವಲಸೆ ಕಾರ್ಮಿಕರು ಊರಿಗೆ ಹೋಗುವ ಸಮಸ್ಯೆ ದೇಶಾದ್ಯಂತ ಇರುವ ಸಮಯದಲ್ಲಿ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ರೈಲು ಹಳಿ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು 16 ಮಂದಿ ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಔರಂಗಾಬಾದ್ ನ ಕರ್ಮಡ್ ಪೊಲೀಸ್ ಠಾಣೆ ಸರಹದ್ದಿನ ಪರ್ಬನಿ-ಮನ್ಮಡ್ ವಲಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಗೂಡ್ಸ್ ರೈಲು ಜಲ್ನಾದಿಂದ ಔರಂಗಾಬಾದ್ ಕಡೆಗೆ ಸಂಚರಿಸುತ್ತಿತ್ತು. ಛತ್ತೀಸ್ ಗಢ ಮೂಲಕ ವಲಸೆ ಕಾರ್ಮಿಕರು ಹಳಿ ಮೇಲೆ ಏಕೆ ಮಲಗಿದ್ದರು ಎಂಬ ಬಗ್ಗೆ ಮತ್ತು ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಔರಂಗಾಬಾದ್ ಎಸ್ಪಿ ಮೊಕ್ಷಡ ಪಾಟೀಲ್ ತಿಳಿಸಿದ್ದಾರೆ.
ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಪೊಲೀಸರು ಮತ್ತು ರೈಲ್ವೆ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿದ್ದು ಪರಿಸ್ಥಿತಿ ಪರಾಮರ್ಶೆ ನಡೆಸುತ್ತಿವೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ರೈಲ್ವೆ ಸಚಿವಾಲಯ, ಹಳಿ ಮೇಲೆ ಕಾರ್ಮಿಕರು ಮಲಗಿರುವುದನ್ನು ಕಂಡು ಗೂಡ್ಸ್ ರೈಲಿನ ಲೊಕೊ ಪೈಲಟ್ ರೈಲನ್ನು ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಆಕಸ್ಮಿಕವಾಗಿ ರೈಲು ಕಾರ್ಮಿಕರ ದೇಹದ ಮೇಲೆ ಹರಿದುಹೋಯಿತು. ಈ ಬಗ್ಗೆ ತನಿಖೆಗೆ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದೆ.








