ಹಾಸನ : ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕಿಲ್ಲರ್ ಕೊರೊನಾ ವೈರಸ್ ಸೋಂಕಿನ ಬಗ್ಗೆ ಹಳ್ಳಿ ಜನರಿಗೆ ಶಾಸಕ ಶಿವಲಿಂಗೇಗೌಡ ಅವರು ತಮ್ಮ ಹಳ್ಳಿ ಸೊಗಡಿನಲ್ಲಿ ಮಾಹಿತಿ ನೀಡಿದ್ದಾರೆ.
“ಚೀನಾದವ್ರು ಹೇಳಿಯೂ ಏಯ್ ಏನ್ ಆಗಲ್ಲಾ ಅಂತ ಟ್ರಂಪ್ ಉದಾಸಿನ ಮಾಡಿದ್ದಕ್ಕೆ ಅಮೆರಿಕಾದಲ್ಲಿ 53 ಸಾವಿರ ಜನ ಸಾವನ್ನಪ್ಪಿದ್ದಾರೆ. ಅದೇ ಲಾಕ್‌ಡೌನ್ ಮಾಡಿದ್ರೆ ಒಬ್ರೂ ಸಾಯ್ತಿರಲಿಲ್ಲ. ಸ್ಪೇನ್ ನಲ್ಲಿ ಜನ ಸೇರಬೇಡಿ ಅಂದ್ರೂ ವಿಶ್ವ ಮಹಿಳಾ ಸಮ್ಮೇಳನ ಮಾಡಿ, ಲಕ್ಷಾಂತರ ಜನರನ್ನು ಸೇರಿಸಿದ್ರು. ಪರಿಣಾಮ ಅಲ್ಲಿ 23 ಸಾವಿರ ಜನ ಸಾವನ್ನಪ್ಪಿದ್ದಾರೆ ಅಂತ ಶಾಸಕ ಶಿವಲಿಂಗೇಗೌಡ, ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಕೆಂಕೆರೆ ಗ್ರಾಮಸ್ಥರಿಗೆ ಲಾಕ್ ಡೌನ್ ಬಗ್ಗೆ ಬುದ್ಧಿಮಾತು ಹೇಳಿದ್ದಾರೆ.
ನಮ್ಮ ದೇಶದಲ್ಲಿ ಲಾಕ್ ಡೌನ್ ಮಾಡಿದ್ದಕ್ಕೆ ಸಾವಿನ ಸಂಖ್ಯೆ ನಿಯಂತ್ರಣದಲ್ಲಿದೆ. ಇಟಲಿಯಲ್ಲಿ ಲಾಕ್ ಡೌನ್ ಮಾಡದೇ ಬಾರ್ ಗೆ ಹೋಗಿ ಮಜಾ ಮಾಡಿದ್ದರಿಂದ ಅಲ್ಲೂ ಜಾಸ್ತಿ ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ನಾವು ಬೇರೆ ದೇಶದವರ ರೀತಿ ಬಸ್ಸು, ಟ್ರೈನು ಬಿಡೋಕಾಗಲ್ಲ. ಏನಾಗುತ್ತೆ ಒಂದೆರಡು ತಿಂಗಳು ಮನೇಲಿರಿ. ಏನಾಗಿದೆ ನಿಮಗೆ ಸರ್ಕಾರ ಅಕ್ಕಿ ಕೊಡ್ತಿದೆ. ಇನ್ನು ಏನಾದ್ರು ಬೇಕಿದ್ರೆ ಕೇಳಿ.. ಸಹಾಯ ಮಾಡೋಣ.
ಆಮೇಲೆ ಎರಡು ತಿಂಗಳದ್ದು ಸೇರಿ ಒಟ್ಟಿಗೆ ದುಡೀವ್ರಂತೆ. ಬೀಜಕ್ಕೆ ತೊಂದ್ರೆ ಇಲ್ಲ, ಗೊಬ್ಬರಕ್ಕೆ ತೊಂದರೆ ಇಲ್ಲ. ಹೊಲದಲ್ಲಿ ಕೆಲಸ ಮಾಡಿ, ಊಟ ಮಾಡಿ ಮನೇಲಿ ಮಲ್ಕೊಳಿ. ಈಗ ಹತ್ತು ಕೆ.ಜಿ ಅಕ್ಕಿ ಕೊಟ್ಟವ್ರೆ, ಮತ್ತೆ ಕೊಡ್ತಾರೆ. ಅಚ್ಚುಕಟ್ಟಾಗಿ ದೋಸೆ ಇಡ್ಲಿ ಮಾಡ್ಕೊಂಡು, ಅನ್ನ ಮಾಡ್ಕೊಂಡು ಉಣ್ಣದು ಕಲ್ಕೊಳ್ಳಿ ಅಂತ ಶಿವಲಿಂಗೇಗೌಡ ಅವರು ತಮ್ಮದೇ ಶೈಲಿಯಲ್ಲಿ ಜನರಿಗೆ ಬುದ್ಧಿವಾದ ಹೇಳಿದ್ದಾರೆ.