ಬೆಳಗಾವಿ : ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ, ಸರ್ಕಾರ ವಿಧಿಸಿದ ಲಾಕ್ ಡೌನ್ ಕಾರಣದಿಂದ ಬಡವರು, ಕೂಲಿಕಾರ್ಮಿಕರು ಹೈರಾಣಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಮಟ್ಟಿಗೆ, ಈ ಕಷ್ಟದ ಕಾಲದಲ್ಲಿ ಸಮಸ್ಯೆಗೆ ಸಿಲುಕಿರುವ ಕುಟುಂಬಗಳ ನೆರವಿಗೆ ಅನೇಕ ಶಾಸಕರು ಮೊದಲ ದಿನದಿಂದಲೇ ಟೊಂಕಕಟ್ಟಿ ನಿಂತಿದ್ದಾರೆ. ಮತ್ತೊಂದಿಷ್ಟು ಶಾಸಕರು ಬಂದೊದಗಿರುವ ಪರಿಸ್ಥಿತಿಯನ್ನು ಜನರ ಅದೃಷ್ಟಕ್ಕೆ ಬಿಟ್ಟು ತಮ್ಮ ಪಾಡಿಗೆ ತಾವು ಇದ್ದು ಬಿಟ್ಟಿದ್ದರೆ, ಇನ್ನು ಕೆಲವರು ಎಷ್ಟು ಸಾಧ್ಯವೋ ಅಷ್ಟು; ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ ಎನ್ನುವಂತೆ ಸ್ಪಂದಿಸಿದ್ದಾರೆ.
ಕಷ್ಟಕಾಲದಲ್ಲಿ ಜನರಿಗೆ ಅತಿಹೆಚ್ಚು ಸ್ಪಂದಿಸಿದ ಶಾಸಕರಲ್ಲಿ ಮೊದಲ ಹೆಸರು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರದು. ಕ್ಷೇತ್ರದಲ್ಲಿ ಅವರಿವರೆನ್ನದೆ ಎಲ್ಲ ಕುಟುಂಬಗಳಿಗೂ ಸುಮಾರು 80 ಸಾವಿರ ದಿನಸಿ ಕಿಟ್ ಗಳನ್ನು ಹಂಚುವ ಮೂಲಕ, ನಿಜವಾಗಿಯೂ ತಾನು ಮಧ್ಯಮ ಪಾಂಡವ ಎಂದು ತೋರಿಸಿಕೊಟ್ಟಿದ್ದಾರೆ. ಬಳಿಕದ ಸ್ಥಾನ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರದು. ಲಾಕ್ ಡೌನ್ ಆದ ದಿನದಿಂದ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದ ಗ್ರಾಮ ಗ್ರಾಮಗಳಿಗೆ ತೆರಳಿ ಜನರ ಕಷ್ಟಸುಖವನ್ನು ಆಲೈಸುತ್ತಿದ್ದಾರೆ. ಸಾವಿರಾರು ದಿನಸಿ ಕಿಟ್ ಗಳು, ಲಕ್ಷಾಂತರ ಮಾಸ್ಕ್ ಗಳು ಮತ್ತು ಸ್ಯಾನಿಟೈಜರ್ ಗಳನ್ನು ಮನೆಮನೆಗೆ ಹಂಚಿದ್ದಾರೆ. ರೈತರಿಂದ ಕಾಯಿಪಲ್ಯೆ ಖರೀದಿಸಿ ವಿತರಿಸಿದ್ದಾರೆ. ಸತೀಶ ಜಾರಕಿಹೊಳಿ ಅವರು ತೋರುತ್ತಿರುವ ಉದಾರತೆ ಕಂಡು ಕ್ಷೇತ್ರದ ಜನರು ‘ನಮ್ಮ ಶಾಸಕರು ಈಗ ಸಾಕಷ್ಟು ಬದಲಾಗಿದ್ದಾರೆ. ಅವರು ಹೀಗೇ ಇರಲಿ’ ಎನ್ನುತ್ತಿದ್ದಾರೆ. ತಮ್ಮ ಕ್ಷೇತ್ರ ಅಷ್ಟೇ ಅಲ್ಲ, ಕ್ಷೇತ್ರದ ಹೊರಗೂ ಕೊಡುಗೆ ಕೊಟ್ಟಿರುವುದು ಸತೀಶ ಅವರ ಹೆಗ್ಗಳಿಕೆ.








