ಮಂಡ್ಯದ ಸರ್ಕಾರಿ ಶಾಲಾ ಆವರಣದಲ್ಲಿ 8 ವರ್ಷದ ಬಾಲಕಿಯನ್ನು ಬೆದರಿಸಿ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಹೃದಯವಿದ್ರಾವಕ ಘಟನೆ ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ. ಈ ಪ್ರಕರಣವು ಸರ್ಕಾರದ ಮಹಿಳಾ ಸುರಕ್ಷತೆಯ ನಿರ್ಲಕ್ಷ್ಯವನ್ನೂ, ಸಾರ್ವಜನಿಕ ಸ್ಥಳಗಳಲ್ಲಿ ಅರಾಜಕತೆಯನ್ನೂ ಒತ್ತಿ ಹೇಳುತ್ತಿದೆ.ವಿರೋಧ ಪಕ್ಷದ ನಾಯಕ ಆರ್. ಆಶೋಕ್ ಈ ಘಟನೆ ಕುರಿತು ತೀವ್ರ ಟೀಕೆ ಮಾಡಿದ್ದಾರೆ. ಪ್ರತಿದಿನ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸಿಎಂ ಸಿದ್ದರಾಮಯ್ಯ ಅವರು, ‘ಇದು ಬಿಜೆಪಿಯ ಕಾಲದಲ್ಲಿ ಆಗುತ್ತಿರಲಿಲ್ಲವಾ?’ ಎಂದು ಉಡಾಫೆ ಹೇಳುವ ಬದಲು, ಈ ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸಬೇಕು. ಮಹಿಳೆಯರ ಮೇಲೆ ದಾಳಿ ಮತ್ತು ಅತ್ಯಾಚಾರವೆಂಬ ಅರಾಜಕತೆಯನ್ನು ತಡೆಹಿಡಿಯಲು ಸರ್ಕಾರ ಕ್ರಮ ಕೈಗೊಳ್ಳಬೇಕು, ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪೊಲೀಸರ ಕ್ರಮ ಮತ್ತು ಗೃಹ ಸಚಿವರ ನಿರ್ಲಕ್ಷ್ಯ:
ಗೃಹ ಸಚಿವ ಡಾ. ಪರಮೇಶ್ವರ ಅವರ ಪಾತ್ರವನ್ನು ಕೂಡ ಪ್ರಶ್ನಿಸಲಾಗಿದ್ದು, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಮೂವರು ದುಷ್ಕರ್ಮಿಗಳನ್ನು ತಕ್ಷಣ ಪತ್ತೆಹಚ್ಚಿ, ಬಂಧಿಸಿ ಕಾನೂನಿನ ವಶಕ್ಕೆ ಒಪ್ಪಿಸಬೇಕು. ಸರ್ಕಾರ ಮಹಿಳೆಯರ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ರಾಜ್ಯದ ಹೆಣ್ಣುಮಕ್ಕಳಿಗೆ ಭದ್ರತೆಯ ಕೊರತೆಯೇ ಮುಂದುವರಿಯುತ್ತದೆ, ಎಂದು ಅವರು ಹೇಳಿದ್ದಾರೆ.
ಈ ಘಟನೆಯು ರಾಜ್ಯದ ಮಹಿಳೆಯರ ಹಾಗೂ ಬಾಲಕಿಯರ ಸುರಕ್ಷತೆಯ ಬಗ್ಗೆ ಆತಂಕವನ್ನು ಹೆಚ್ಚಿಸಿದೆ. ಸರ್ಕಾರ ಅಲಕ್ಷ್ಯ ತೋರುತ್ತಿರುವುದರಿಂದ, ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಭದ್ರತೆಯ ಖಾತರಿಯಿಲ್ಲ ಎಂಬ ಅಭಿಪ್ರಾಯ ಬಲವಾಗುತ್ತಿದೆ.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ತಕ್ಷಣವೇ ಶಿಕ್ಷೆ ನೀಡಲು ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಕೂಗಾಗಿದೆ.