Karnataka | ಸರ್ಕಾರಿ ಕಚೇರಿಯಲ್ಲಿ ಫೋಟೋ, ವಿಡಿಯೋ ಮಾಡುವಂತಿಲ್ಲ
ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕಿದ್ದ ರಾಜ್ಯ ಸರ್ಕಾರವೇ ಅವರ ರಕ್ಷಣೆಗೆ ನಿಂತಂತಿದೆ. ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕರು ಫೋಟೋ, ವಿಡಿಯೋ ಮಾಡುವಂತಿಲ್ಲ ಎಂಬ ಸರ್ಕಾರದ ಆದೇಶಕ್ಕೆ ರಾಜ್ಯದಾದ್ಯಂತ ಭಾರಿ ಟೀಕೆ ವ್ಯಕ್ಯವಾಗುತ್ತಿದೆ.
ಹೌದು..! ಸಾಮಾನ್ಯವಾಗಿ ಇಷ್ಟುದಿನ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಚಾರ ಅಥವಾ ಜನರ ಜೊತೆ ಕೆಟ್ಟದ್ದಾಗಿ ವರ್ತಿಸುವ ಅಧಿಕಾರಿಗಳ ಮುಖ ಬಯಲು ಮಾಡಲು ಜನರು ಮೊಬೈಲ್ ಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಫೋಟೋ ಅಥವಾ ವಿಡಿಯೋ ಮಾಡುತ್ತಿದ್ದರು. ಮುಖ್ಯವಾಗಿ ಅಧಿಕಾರಿಗಳು ಲಂಚ ಪಡೆಯುವ ದೃಶ್ಯಗಳನ್ನು ಜನರು ಚಿತ್ರೀಕರಣಿಸಿ ಅವುಗಳನ್ನು ಫೇಸ್ ಬುಕ್, ಟ್ವಿಟ್ಟರ್, ವಾಟ್ಸಾಪ್ ಗಳಲ್ಲಿ ಹಂಚಿಕೊಳ್ಳುತ್ತಿದ್ದರು.
ಹೀಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡ ಬಳಿಕ ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಿ ಅಂತಹ ಅಧಿಕಾರಿಗಳನ್ನು ಅಮಾನತು ಮಾಡುವುದೋ ಅಥವಾ ವರ್ಗಾವಣೆ ಮಾಡೋದೋ ಆಗುತ್ತಿತ್ತು. ಆದ್ರೆ ಇನ್ಮುಂದೆ ಈ ರೀತಿ ಆಗಲು ಸಾಧ್ಯವೇ ಇಲ್ಲ. ಯಾಕಂದರೇ ರಾಜ್ಯ ಸರ್ಕಾರ ಸರ್ಕಾರಿ ಕಚೇರಿಗಳಲ್ಲಿ ಜನರು ಫೋಟೋ ಅಥವಾ ವಿಡಿಯೋವನ್ನು ಮಾಡಬಾರದು ಎಂಬ ಆದೇಶವನ್ನು ಹೊರಡಿಸಿದೆ.

ಸರ್ಕಾರದ ಹೊಸ ಆದೇಶದ ಪ್ರಕಾರ ರಾಜ್ಯದ ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರು ಕಚೇರಿಯ ಒಳಗಿನ ಫೋಟೋ ಅಥವಾ ವಿಡಿಯೋ ಚಿತ್ರಿಕರಣ ಮಾಡುವಂತಿಲ್ಲ ಎಂದಿದೆ.
ಅಂದಹಾಗೆ ಕರ್ನಾಟಕ ರಾಜ್ಯ ನೌಕರರ ಸಂಘ, ಕೆಲವು ಖಾಸಗಿ ವ್ಯಕ್ತಿಗಳು ಸರ್ಕಾರಿ ಕಚೇರಿ ವೇಳೆಯಲ್ಲಿ ಬಂದು ಕಚೇರಿಯ ವಿಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಾ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರದ ಘನತೆಗೆ ಕುಂದು ಉಂಟಾಗುತ್ತಿದೆ. ಹೀಗಾಗಿ ಸರ್ಕಾರಿ ಕಚೇರಿಗಳಲ್ಲಿ ಖಾಸಿಗ ವ್ಯಕ್ತಿಗಳು ಅನಧಿಕೃತವಾಗಿ ವಿಡಿಯೋ ಮಾಡದಂತೆ ನಿಷೇಧಿಸುವಂತೆ ಮನವಿ ಮಾಡಿತ್ತು. ಅದನ್ನ ಕುಲಂಕುಷವಾಗಿ ಪರಿಶೀಲಿಸಿರುವ ರಾಜ್ಯ ಸರಕಾರ ಸಾರ್ವಜನಿಕರು ಕಚೇರಿಯ ಒಳಗಿನ ಫೋಟೋ ಅಥವಾ ವಿಡಿಯೋ ಚಿತ್ರಿಕರಣ ಮಾಡುವಂತಿಲ್ಲ ಎಂದು ಆದೇಶಿಸಿದೆ.
ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇದೊಂದು ರೀತಿ ಲಂಚ ತೆಗೆದುಕೊಳ್ಳಲು ಸರ್ಕಾರವೇ ಪರವಾನಿಗೆ ನೀಡಿದಂತೆ. ಲಂಚ ನೀಡಿ, ಆದ್ರೆ ಅದನ್ನ ವಿಡಿಯೋ ಮಾಡಬೇಡಿ ಎಂದು ಸರ್ಕಾರ ಹೇಳಿದಂತಿದೆ. ಇದು ಹಾಸ್ಯಾಸ್ಪದ ನಿರ್ಧಾರವಾಗಿದೆ ಎಂದು ಜನರು ಟೀಕೆ ಮಾಡುತ್ತಿದ್ದಾರೆ.