ನವದೆಹಲಿ : ಭಾರತದ ಮಾಜಿ ಆಟಗಾರ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಮಧ್ಯೆ ಜಗಳ ಮಾಸುವ ಮುನ್ನವೇ ಟ್ವೀಟ್ ವೊಂದು ಸದ್ದು ಮಾಡುತ್ತಿದೆ.
ಗಭೀರ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೆಸರು ಸೂಚಿಸದೇ ಪೋಸ್ಟ್ ಹಾಕಿದ್ದಾರೆ. ಆದರೆ, ಗಂಭೀರ್ ಅವರ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಖಾಸಗಿ ಸುದ್ದಿವಾಹಿನಿಯ ನಿರೂಪಕ ಆಗಿರುವ ರಜತ್ ಶರ್ಮಾ ವಿರುದ್ಧವೇ ಟ್ವೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಲಕ್ನೋ ಹಾಗೂ ಆರ್ ಸಿಬಿ ಪಂದ್ಯದ ನಂತರ ಮೈದಾನದಲ್ಲಿ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಕುರಿತು ನಿರೂಪಕ ರಜತ್ ಶರ್ಮಾ ಅವರು ತಮ್ಮ ಕಾರ್ಯಕರ್ಮದಲ್ಲಿ ಗಂಭೀರ್ ಅವರ ವರ್ತನೆಯನ್ನು ಕ್ರೀಡಾ ಸ್ಪೂರ್ತಿಗೆ ವಿರುದ್ಧ ಎಂದು ಟೀಕಿಸಿದ್ದರು. ಅಲ್ಲದೇ, ಕೊಹ್ಲಿಗೆ ಹೆಚ್ಚುತ್ತಿರುವ ಜನಪ್ರಿಯತೆಯ ಬಗ್ಗೆ ಅವರಿಗೆ ಸಮಸ್ಯೆ ಇದೆ. ಗಂಭೀರ್ ಅವರ ಈ ನಡುವಳಿಕೆ ಕ್ರೀಡೆಗೆ ಹಾನಿಕಾರಕ ಮತ್ತು ಖಂಡಿಸಲು ಅರ್ಹ ಎಂದು ಹೇಳಿದ್ದರು. ಹೀಗಾಗಿಯೇ ಗಂಭೀರ್ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.
Man who ran away from Delhi Cricket citing “pressure” seems over eager to sell paid PR as concern for cricket! यही कलयुग़ है जहां ‘भगोड़े’ अपनी ‘अदालत’ चलाते हैं।
— Gautam Gambhir (@GautamGambhir) May 3, 2023
ದೆಹಲಿ ಕ್ರಿಕೆಟ್ ನಿಂದ ಓಡಿ ಹೋದ ವ್ಯಕ್ತಿ ಈಗ ಒತ್ತಡ ಸೃಷ್ಟಿಸುತ್ತಿದ್ದಾರೆ. ಕ್ರಿಕೆಟ್ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಲೇ ಪೇಯ್ಡ್ ಪಿಆರ್ ಮಾಡುವುದರಲ್ಲಿ ನಿರತರಾಗಿದ್ದಾರಂತೆ. ಪಲಾಯನಗೈದವರು ನ್ಯಾಯ ನೀಡುವ ಕಲಿಯುಗ ಇದು ಎಂದು ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಜತ್ ಶರ್ಮಾ ಅವರು ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ನೇಮಕೊಂಡು 16 ತಿಂಗಳು ಕಾರ್ಯಭಾರ ನಡೆಸಿದ್ದರು. ಆ ನಂತರ ಅವರು ರಾಜೀನಾಮೆ ನೀಡಿದ್ದರು. ಆಗ ಒತ್ತಡದಿಂದಾಗಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದರು. ಸದ್ಯ ಒತ್ತಡದ ಹೇಳಿಕೆಯನ್ನೇ ಗಂಭೀರ್ ಅವರು ಟ್ವೀಟ್ ಮೂಲಕ ಟೀಕಿಸಿದ್ದಾರೆ.








