ಕುಮಾರಸ್ವಾಮಿ ಸತ್ಯ ಹರಿಶ್ಚಂದ್ರನ ಎರಡನೆ ಕುಡಿ : ಬಿ.ಸಿ.ಪಾಟೀಲ್
ಹಾವೇರಿ : ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಹೋದ ನಂತರ ಮೀನನ್ನು ಹೊರಗೆ ಹಾಕಿದಂತಾಗಿದೆ. ಅವರು ದುರಹಂಕಾರದಿಂದ, ಸ್ವೇಚ್ಛಾಚಾರದಿಂದ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ ಎಂದು ಸಚಿವ ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಹಿರೇಕೆರೂರಲ್ಲಿ ಏನ್ ಮಹಾನ್ ಅಭಿವೃದ್ಧಿ ಆಗಿದ್ಯಾ ಎಂಬ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಮದಗಮಾಸೂರು ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ ಬಿ.ಸಿ.ಪಾಟೀಲ್, ಕುಮಾರಸ್ವಾಮಿ ಮಹಾನ್ ಮಹಾನ್ ಪ್ರಾಮಾಣಿಕ, ಸತ್ಯ ಹರಿಶ್ಚಂದ್ರನ ಎರಡನೆ ಕುಡಿ. ಪ್ರಾಮಾಣಿಕತೆಗೆ ಹೆಸರಾದವರು ಅಂದ್ರೆ ಕುಮಾರಸ್ವಾಮಿ.
ಕುಮಾರಸ್ವಾಮಿ ನಾಮಿನೇಶನ್ ಕೊಟ್ಟ ಮೇಲೆ ಕ್ಷೇತ್ರಕ್ಕೆ ಹೋಗೋದಿಲ್ಲ. ಜನರು ಅವರನ್ನ ಆಯ್ಕೆ ಮಾಡ್ತಾರೆ. ಅವರು ಯಾವುದೇ ಒಂದು ಪೈಸೆ ಖರ್ಚು ಮಾಡೋದಿಲ್ಲ. ಅವರಂಥಾ ಪ್ರಾಮಾಣಿಕ ವ್ಯಕ್ತಿಯನ್ನ ನಾನು ಇದುವರೆಗೆ ಜೀವನದಲ್ಲಿ ನೋಡಿಯೇ ಇಲ್ಲ ಎಂದು ಲೇವಡಿ ಮಾಡಿದರು.
ಅಲ್ಲದೆ ಬೇರೆ ಯಾರೂ ಅವರ ಮುಖ್ಯಮಂತ್ರಿ ಸ್ಥಾನ ಕಳೆದಿಲ್ಲ. ಅವರಲ್ಲಿರುವ ಸ್ವಾರ್ಥ ಭಾವನೆ, ಎರಡು ಜಿಲ್ಲೆಗೆ ಸೀಮಿತವಾದ ರಾಜ್ಯದ ಆಡಳಿತ ಇತ್ತು. ಹೀಗಾಗಿ ಅವರನ್ನ ಸಿಎಂ ಸ್ಥಾನದಿಂದ ಕೆಳಗೆ ಇಳಿಸಬೇಕು ಅಂತಾ ಕೆಳಗಿಳಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಇನ್ನು ರಾಜೀನಾಮೆ ಕೊಟ್ಟು ನನ್ನ ಸರ್ಕಾರ ತೆಗೆದ್ರಲ್ಲಾ? ಹಿರೇಕೇರೂರು ಮಹಾನ್ ಅಭಿವೃದ್ಧಿ ಆಗಿ ಬಿಡ್ತಾ. ನಾನಿದ್ದಾಗ ಕೊಟ್ಟ ಅನುದಾನವೇ ಈಗಲೂ ನಡೆದಿದೆ ಎಂಬ ಹೆಚ್ ಡಿಕೆ ಹೇಳಿಕೆ ಟಾಂಗ್ ಕೊಟ್ಟ ಪಾಟೀಲ್, ಹಿರೇಕೆರೂರಲ್ಲಿ ಅಭಿವೃದ್ಧಿ ನೋಡಬೇಕು ಅಂದ್ರೆ ನಮಗೆ ಕುಮಾರಸ್ವಾಮಿ ಸರ್ಟಿಫಿಕೇಟ್ ಬೇಕಿಲ್ಲ. ನಮಗೆ ಜನತೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದರು.









