ಮೋದಿ, ಮಮತಾ ಬ್ಯಾನರ್ಜಿ ಬಗ್ಗೆ ಟೀಕಿಸೋದು ಆತ್ಮವಂಚನೆ : ಕುಮಾರಸ್ವಾಮಿ
ಬೆಂಗಳೂರು : ರಾಜ್ಯದ ಜನರ ತೆರಿಗೆ ಹಣ, ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ನುಂಗಿಹಾಕುತ್ತಿರುವ, ಬಿಜೆಪಿ ಸರ್ಕಾರದ ‘ಏಕಗವಾಕ್ಷಿ’ ವ್ಯವಸ್ಥೆಯನ್ನು ಮೋದಿ ಮೊದಲು ಕೊನೆಗಾಣಿಸಲಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಏಕಗವಾಕ್ಷಿ ಹೇಳಿಕೆ ಬಗ್ಗೆ ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಗಳನ್ನ ಮಾಡಿರುವ ಹೆಚ್ ಡಿ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಬಂಗಾಳದ ಏಕಗವಾಕ್ಷಿ ವ್ಯವಸ್ಥೆ ಬಗ್ಗೆ ಮಾತಾಡಿದ್ದಾರೆ.
ದೇಶದಲ್ಲಿ ಅಭಿವೃದ್ಧಿಗೆ ಏಕಗವಾಕ್ಷಿ ವ್ಯವಸ್ಥೆ ಇದೆ ಎಂದೂ, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಕೇಂದ್ರಿತ ಏಕಗವಾಕ್ಷಿ ವ್ಯವಸ್ಥೆ ಇದೆ ಎಂದು ಹೇಳಿದ್ದಾರೆ.
ಆದರೆ, ಕರ್ನಾಟಕದಲ್ಲಿ ಯಾವ ಏಕಗವಾಕ್ಷಿ ವ್ಯವಸ್ಥೆ ಇದೆ? ಮೋದಿ ಉತ್ತರಿಸುವರೇ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಖುರ್ಚಿ ಹಿಂದೆ ಅಡಗಿ ಕುಳಿತಿರುವ, ರಾಜ್ಯದ ಬಿಜೆಪಿ ಸರ್ಕಾರದ ‘ಏಕಗವಾಕ್ಷಿ’ ಬಗ್ಗೆ ಬಿಜೆಪಿಯ ಹಿರಿಯ ಶಾಸಕರೇ ಹಾದಿ ಬೀದಿಯಲ್ಲಿ ಗೋಳಾಡುತ್ತಿದ್ದಾರೆ.
ಯಡಿಯೂರಪ್ಪ ಕುಟುಂಬದ ಅಕ್ರಮದ ಬಗ್ಗೆ ಬಿಜೆಪಿಗರೇ ಆರೋಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಸ್ವಘೋಷಿತ ‘ಮಹಾನಾಯಕ-ಏಕಗವಾಕ್ಷಿ’ ಬಗ್ಗೆ ಮೋದಿ ಮಾತಾಡುವರೇ
ಕರ್ನಾಟಕದ ಸರ್ಕಾರದಲ್ಲೇ ‘ಏಕಗವಾಕ್ಷಿ’ಯೊಂದು ಇರುವಾಗ, ಅದನ್ನು ಉದ್ದೇಶಪೂರ್ವಕವಾಗಿ ಪೋಷಿಸುತ್ತಿರುವಾಗ ಮೋದಿ ಅವರು ಮಮತಾ ಬ್ಯಾನರ್ಜಿ ಬಗ್ಗೆ ಟೀಕಿಸುವುದು ಆತ್ಮವಂಚನೆ.
ರಾಜ್ಯದ ಜನರ ತೆರಿಗೆ ಹಣ, ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ನುಂಗಿಹಾಕುತ್ತಿರುವ, ಬಿಜೆಪಿ ಸರ್ಕಾರದ ‘ಏಕಗವಾಕ್ಷಿ’ ವ್ಯವಸ್ಥೆಯನ್ನು ಮೋದಿ ಮೊದಲು ಕೊನೆಗಾಣಿಸಲಿ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.