ಬೆಂಗಳೂರು : “ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ರಾಜ್ಯದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗಲಭೆಯನ್ನು ಪರಾಮರ್ಶಿಸಿ, ದುಷ್ಟರನ್ನು ಶಿಕ್ಷಿಸುವ ಕಾರ್ಯವಾಗಬೇಕಾಗಿತ್ತು. ಈ ಘಟನೆಯ ಅಧ್ಯಯನದ ಮೂಲಕ ಮುಂದಿನ ದಿನಗಳಲ್ಲಿ ಗಲಭೆಗಳು ಸಂಭವಿಸದಂತೆ ಎಚ್ಚರಿಕೆ, ಜವಾಬ್ದಾರಿಯುತ ನಡವಳಿಕೆಯನ್ನು ಸರ್ಕಾರ ಮತ್ತು ಅದರ ಚುಕ್ಕಾಣಿ ಹಿಡಿದಿರುವ ಪಕ್ಷ, ವಿಪಕ್ಷ ಪ್ರದರ್ಶಿಸಬೇಕಾಗಿತ್ತು. ಆದರೆ ಈ ಘಟನೆಯನ್ನೇ ನೆಪ ಮಾಡಿಕೊಂಡು ರಾಷ್ಟ್ರೀಯ ಪಕ್ಷಗಳೆರಡೂ ಕೆಸರೆರಚಾಟದಲ್ಲಿ ತೊಡಗಿವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಜನರ ಮನಸ್ಸಿನಲ್ಲಿರಬಹುದಾದ ತಮ್ಮ ವಿಶ್ವಾಸಾರ್ಹತೆ, ಉತ್ತರದಾಯಿತ್ವವನ್ನು ಬಿಜೆಪಿ-ಕಾಂಗ್ರೆಸ್ ಪಕ್ಷಗಳೆರಡೂ ಕಳೆದುಕೊಂಡು ನಿರ್ವಾಣಗೊಂಡಿವೆ. ಪ್ರತೀ ಘಟನೆಯಲ್ಲೂ ರಾಜಕೀಯ ಧ್ರುವೀಕರಣಕ್ಕೆ ಬೇಕಾಗುವ ಅಂಶ ಹುಡುಕುವ ಈ ಎರಡೂ ಪಕ್ಷಗಳು ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸಬಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಗೆ ಪ್ರಶ್ನೆ: ಬೆಂಕಿ ಬಿದ್ದ ಮನೆಯಲ್ಲೂ ರಾಜಕಾರಣ ಮಾಡುವಿರೇ?
1. ಡಿ.ಜೆ.ಹಳ್ಳಿ ಪ್ರಕರಣ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಗೃಹ ಇಲಾಖೆ, ಗುಪ್ತಚರ ಇಲಾಖೆ ಮತ್ತು ಸರ್ಕಾರದ ಅತಿ ದೊಡ್ಡ ವೈಫಲ್ಯ. ಇದರ ಹೊಣೆ ಹೊರಬೇಕಾದ ಬಿಜೆಪಿ ಸರ್ಕಾರ ಅಕ್ಷರಶಃ ಹೊಣೆಗೇಡಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಗೃಹ ಇಲಾಖೆಯ ಯಾವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ? ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ಇದರಲ್ಲಿ ರಾಜಕೀಯ ಧ್ರುವೀಕರಣದ ಸಂಚು ನಡೆಸುತ್ತಿದೆ. ನಾಚಿಕೆಯಾಗದೇ ಬಿಜೆಪಿಗೆ?
2. ಡಿ.ಜೆ.ಹಳ್ಳಿ ಘಟನೆಯಲ್ಲಿ ಕಾಂಗ್ರೆಸ್ಸಿಗರೇ ದುಷ್ಕøತ್ಯ ನಡೆಸಿದ್ದಾರೆ, ಕಾಂಗ್ರೆಸ್ನ ಕೈವಾಡವಿದೆ ಎಂದು ಬೀದಿಯಲ್ಲಿ ಹೇಳುತ್ತಿರುವ ಬಿಜೆಪಿಯ ವಾಚಾಳಿ, ಬಾಯಿಬಡುಕ ಮಂತ್ರಿ, ಶಾಸಕರು ತಮ್ಮ ಬಳಿ ಇರುವ ಕಾಂಗ್ರೆಸ್ ವಿರುದ್ಧದ ಸಾಕ್ಷಿಯನ್ನು ತನಿಖಾಧಿಕಾರಿಗಳಿಗೆ ಕೊಡಬಾರದು ಏಕೆ? ಹೇಗಿದ್ದರು ಸರ್ಕಾರವೇ ಬಿಜೆಪಿಯದ್ದಾಗಿದೆ. ಸೂಕ್ತ ತನಿಖೆ ನಡೆಸಿ ಕಾಂಗ್ರೆಸ್ ವಿರುದ್ಧ ಕ್ರಮ ಕೈಗೊಳ್ಳಬಾರದೇಕೆ? ಸಾಕ್ಷ್ಯವಿಲ್ಲವಾದರೆ ಬಿಜೆಪಿಯದ್ದೂ ಕೇವಲ ರಾಜಕೀಯ ಧ್ರುವೀಕರಣ ಉದ್ದೇಶದ ಬಡಾಯಿತನವೇ?
3. ಗಲಭೆ ಸೃಷ್ಟಿಸಲೆಂದೇ ಅನ್ಯ ರಾಜ್ಯಗಳಿಂದ ಗೂಂಡಾಗಳನ್ನು ಕರೆತರಲಾಗಿತ್ತು ಎಂದು ಬಿಜೆಪಿ ಆರಂಭದಲ್ಲಿ ಉಯಿಲೆಬ್ಬಿಸಿತು. ಹಾಗಾದರೆ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಬಂಧನಕ್ಕೊಳಗಾಗಿರುವ ಅನ್ಯ ರಾಜ್ಯದ ಗೂಂಡಾಗಳು ಎಷ್ಟು ಜನ? ಕೋವಿಡ್ ಸಂದರ್ಭದಲ್ಲಿ ಗಡಿಯಲ್ಲಿ ಸಂಚಾರ ಕಷ್ಟವಿರುವಾಗ ಗೂಂಡಾಗಳು ಗುಂಪು ಗುಂಪಾಗಿ ನಮ್ಮ ಚೆಕ್ ಪೆÇೀಸ್ಟ್ಗಳನ್ನು ದಾಟಿ ಬಂದದ್ದು ಹೇಗೆ? ಬಂದಿದ್ದೇ ಆದರೆ ವೈಫಲ್ಯ ಯಾರದ್ದು?
4. ದೊಡ್ಡ ಅಂತರದ ಮತಗಳಿಂದ ಗೆದ್ದ ಶಾಸಕನೊಬ್ಬನ ಮನೆಗೇ ರಕ್ಷಣೆ ಹಾಗೂ ಪೆÇಲೀಸ್ ಠಾಣೆಗೆ ರಕ್ಷಣೆ ನೀಡಲಾರದಷ್ಟು ದುರ್ಬಲವಾಗಿರುವ, ಶಕ್ತಿಹೀನ ಸರ್ಕಾರ ಸಾಮಾನ್ಯರಲ್ಲಿ ಸಾಮಾನ್ಯರ ಹಿತ ಕಾಯಲು ಶಕ್ತವಾಗಿದೆಯೇ? ಹಾಗಿಲ್ಲ ಎಂದ ಮೇಲೆ ಸರ್ಕಾರ ಇದ್ದು ಪ್ರಯೋಜನವೇನು? ಇಲ್ಲವೇ ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಇಂಥದ್ದೊಂದು ಗಲಭೆ ಬೇಕಾಗಿತ್ತೇ?
5. ಕೋಮು ಸೂಕ್ಷ್ಮ ವಿಚಾರಗಳಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ನೂಕು ನುಗ್ಗಲಿನಲ್ಲೂ ಮುಂದೆ ಬರುವ ಬಿಜೆಪಿಗೆ ನೈತಿಕ ರಾಜಕಾರಣದ ಅರ್ಥವೇನಾದರೂ ಗೊತ್ತಿದೆಯೇ? ಎಂದು ಕುಮಾರಸ್ವಾಮಿ ಪ್ರಶ್ನೆ ಹಾಕಿದ್ದಾರೆ.