BJP ಎಂದರೆ ಬಡವರ ರಕ್ತಹೀರಿ ಸಿರಿವಂತರ ಖಜಾನೆ ಭರ್ತಿ ಮಾಡುವ ಪಕ್ಷ
ಬೆಂಗಳೂರು : ಬಿಜೆಪಿ ಎಂದರೆ ಭಾರತೀಯ ಜನತಾ ಪಕ್ಷವಲ್ಲ, ಬಡವರ ರಕ್ತಹೀರಿ ಸಿರಿವಂತರ ಖಜಾನೆ ಭರ್ತಿ ಮಾಡುವ ʼಬಲ್ಲಿದ ಜನರ ಪಕ್ಷʼ. ಬೆಲೆ ಶೂಲದಿಂದ ಬಡಜನರನ್ನು ಬರ್ಬಾದ್ ಮಾಡುತ್ತಿರುವ ಪಕ್ಷ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಲೆ ಏರಿಕೆ ವಿಚಾರವಾಗಿ ಸರಣಿ ಟ್ವೀಟ್ ಗಳ ಮೂಲಕ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಹಿಜಾಬ್, ಕೇಸರಿ ಶಾಲು, ಟಿಪ್ಪು ಪಠ್ಯ, ಮುಸ್ಲಿಂ ವರ್ತಕರಿಗೆ ನಿಷೇಧ, ಹಲಾಲ್ ಕಟ್ ಬಗ್ಗೆ ಅಬ್ಬರಿಸಿ ಬೊಬ್ಬಿರಿಯುವ ʼಶ್ರೀಮಂತರ ಪಕ್ಷ ಬಿಜೆಪಿʼಯು ಬೆಲೆ ಏರಿಕೆ ಬಗ್ಗೆ ಮಾತ್ರ ಮೌನವಾಗಿದೆ! ರಾಜ್ಯ ಸರಕಾರವೂ ಮೌನ!! ಮುಖ್ಯಮಂತ್ರಿಗಳೂ ಮೌನ!!! ಮೌನಂ ಶರಣಂ ಗಚ್ಛಾಮಿ.
ಮೌನಿ ಪಕ್ಷ! ಮೌನಿ ಸರಕಾರ!! ಮೌನಿ ಮುಖ್ಯಮಂತ್ರಿ!!! ಡಾ.ಮನಮೋಹನ್ ಸಿಂಗ್ ಅವರನ್ನು ʼಮೌನಿ ಪ್ರಧಾನಿʼ ಎಂದ ಇವರ ಅಬ್ಬರ ಎಲ್ಲಿ ಉಡುಗಿ ಹೋಗಿದೆ? ದನಿಯೆತ್ತಿ ಬೆಲೆ ಏರಿಕೆ ವಿರುದ್ಧ. ಇದು ನನ್ನ ಆಗ್ರಹ.
ಬೆಲೆ ಏರಿಕೆ ಬಗ್ಗೆ ಜನರ ಆಕ್ರೋಶ ಎಲ್ಲಿ ಆಸ್ಫೋಟಗೊಂಡು ಬಿಜೆಪಿ ಬುಡಕ್ಕೆಲ್ಲಿ ಬೆಂಕಿ ಬೀಳುತ್ತದೋ ಎಂಬ ಭಯದಿಂದ ಆ ಮುಗ್ಧಜನರ ಮನಸ್ಸನ್ನು ಸೂಕ್ಷ್ಮ ವಿಷಯಗಳ ಕಡೆ ಹೊರಳುವಂತೆ ಮಾಡಲಾಗಿದೆ. ʼ150 ಸೀಟಿನ ರೋಡ್ ಮ್ಯಾಪ್ ಎಲ್ಲಿ ಮಣ್ಣುಪಾಲಾಗುತ್ತದೋʼ ಎಂದು ಹಿಂದುತ್ವದ ವಿನಾಶಕ್ಕೆ ಹಿಂಸಾಚಾರದ ಶಂಖ ಊದಲಾಗಿದೆ
ಘನವೇತ್ತ ಮಾಜಿ ಸಿಎಮ್ಮು, ಮಾಜಿ ಕೇಂದ್ರಮಂತ್ರಿಗಳೂ ಡಿ.ವಿ.ಸದಾನಂದಗೌಡರು, ಬೆಲೆ ಏರಿಕೆಗೆ ಹಿಂದಿನ ಯುಪಿಎ ಸರಕಾರ ಕಾರಣ ಎಂದಿದ್ದಾರೆ. 8 ವರ್ಷವಾದರೂ ಯುಪಿಎ ಮಾಡಿದ ತಪ್ಪು ಸರಿ ಮಾಡಲಿಲ್ಲ, ಏಕೆ? ಅಡುಗೆ ಮನೆಗಳಲ್ಲಿ ತಾಯಂದಿರು, ʼಬೆಲೆ ಏರಿಕೆ ಬೆಂಕಿʼಯಲ್ಲಿ ಬೇಯುತ್ತಿದ್ದರೆ ನಿಮಗೆ ರಾಜಕೀಯ ಮುಖ್ಯವಾಗಿದೆ. ನಾಚಿಕೆಯಾಗಬೇಕು ಎಂದು ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.h d kumaraswamy sparked against bjp in bangalore