HDK | ಒಂದೇ ತೆರಿಗೆ, ಒಂದೇ ಭಾಷೆ.. ಸರ್ವಾಧಿಕಾರಿ ಮನಃಸ್ಥಿತಿ.. ಹಿಂದಿ ಎಲ್ಲರ ಭಾಷೆಯಲ್ಲ
ಬೆಂಗಳೂರು : ಹಿಂದಿ ರಾಷ್ಟ್ರ ಭಾಷೆಯಲ್ಲ.. ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ಟ್ವೀಟ್ ವಾರ್ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಕಿಚ್ಚ ಸುದೀಪ್ ಬೆಂಬಲಕ್ಕೆ ನಿಂತಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಹೆಚ್ ಡಿ ಕುಮಾರಸ್ವಾಮಿ, ಚಿತ್ರನಟ ಕಿಚ್ಚ ಸುದೀಪ್ ಅವರು, ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿರುವುದು ಸರಿ ಇದೆ. ಅವರ ಮಾತಿನಲ್ಲಿ ತಪ್ಪು ಹುಡುಕುವಂಥದ್ದು ಏನೂ ಇಲ್ಲ. ನಟ ಅಜಯ್ ದೇವಗನ್ ಅತಿರೇಖದಿಂದ ಪ್ರತಿಕ್ರಿಯಿಸಿ ಅಧಿಕ ಪ್ರಸಂಗತನ ಮೆರೆದಿದ್ದಾರೆ.
ದೇಶ ಭಾಷೆಗಳಲ್ಲಿ ಹಿಂದಿಯೂ ಒಂದಷ್ಟೇ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಮರಾಠಿಯಂತೆ ಅದೂ ಒಂದು ಭಾಷೆ ಮಾತ್ರ. ಭಾರತ ಬಹು ಭಾಷೆಗಳ ತೋಟ. ಬಹು ಧರ್ಮ, ಬಹು ಭಾಷೆ, ಬಹು ಸಂಸ್ಕೃತಿಗಳ ಬೀಡು. ಇದನ್ನು ಕದಡುವ ಪ್ರಯತ್ನ ಬೇಡ.
https://twitter.com/hd_kumaraswamy/status/1519356624875311106?s=20&t=aV5IEwp-Z51p9e3d7wVDuQ
ಹೆಚ್ಚು ಜನ ಮಾತನಾಡುತ್ತಾರೆ ಎಂದ ಮಾತ್ರಕ್ಕೆ ಹಿಂದಿ ಎಲ್ಲರ ಭಾಷೆಯಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೇವಲ 9ಕ್ಕಿಂತ ಕಡಿಮೆ ರಾಜ್ಯಗಳಲ್ಲಿ ಹಿಂದಿ 2ನೇ ಭಾಷೆ, ಇಲ್ಲವೇ 3ನೇ ಭಾಷೆ ಅಥವಾ ಅದೂ ಆಗಿಲ್ಲ. ಹೀಗಿದ್ದ ಮೇಲೆ ಅಜಯ್ ದೇವಗನ್ ಮಾತುಗಳು ಎಷ್ಟು ಸರಿ. ಡಬ್ ಮಾಡಬೇಡಿ ಎಂದರೆ ಏನರ್ಥ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮೊದಲಿನಿಂದಲೂ ಕೇಂದ್ರದಲ್ಲಿ ಆಡಳಿತ ನಡೆಸಿದ ‘ ಹಿಂದಿ ರಾಜಕೀಯ ಪಕ್ಷಗಳು ‘ ಪ್ರಾದೇಶಿಕ ಭಾಷೆಗಳನ್ನು ಹೊಸಕಿ ಹಾಕುವ ದುಷ್ಟ ಪ್ರಯತ್ನ ಮಾಡುತ್ತಿವೆ. ಕಾಂಗ್ರೆಸ್ ಆರಂಭ ಮಾಡಿದ ಅನ್ಯಭಾಷೆಗಳ ಹತ್ತಿಕ್ಕುವ ಕೃತ್ಯಗಳನ್ನು ಈಗ ಬಿಜೆಪಿ ಅತಿಯಾಗಿ ಮುಂದುವರಿಸುತ್ತಿದೆ.
ಒಂದೇ ಪಕ್ಷ, ಒಂದೇ ತೆರಿಗೆ, ಒಂದೇ ಭಾಷೆ, ಒಂದೇ ಸರಕಾರ ಎನ್ನುವ ಸರ್ವಾಧಿಕಾರಿ ಮನಃಸ್ಥಿತಿಯ ಬಿಜೆಪಿ ಮತ್ತು ಅದರ ಹಿಂದಿ ರಾಷ್ಟ್ರೀಯವಾದದ ಮುಖವಾಣಿ ರೀತಿಯಲ್ಲಿ ದೇವಗನ್ ಬಡಬಡಿಸಿದ್ದಾರೆ.
https://twitter.com/hd_kumaraswamy/status/1519356618533613571?s=20&t=aV5IEwp-Z51p9e3d7wVDuQ
ದೇವಗನ್ ಅರ್ಥ ಮಾಡಿಕೊಳ್ಳಬೇಕು. ಕನ್ನಡ ಚಿತ್ರರಂಗ ಇವತ್ತು ಹಿಂದಿ ಚಿತ್ರರಂಗವನ್ನು ಮೀರಿ ಬೆಳೆಯುತ್ತಿದೆ. ಕನ್ನಡಿಗರು ಕೂಡ ಪ್ರೋತ್ಸಾಹಿಸಿದ ಪರಿಣಾಮ ಹಿಂದಿ ಚಿತ್ರರಂಗ ಬೆಳೆದಿದೆ. ಅವರ ‘ಫೂಲ್ ಔರ್ ಕಾಂಟೆ’ ಸಿನಿಮಾ ಬೆಂಗಳೂರಿನಲ್ಲಿ ಒಂದು ವರ್ಷ ಪ್ರದರ್ಶನ ಆಗಿದ್ದನ್ನು ದೇವಗನ್ ಮರೆಯಬಾರದು.
ಶ್ರೇಷ್ಠತೆಯ ವ್ಯಸನ ಭಾರತವನ್ನು ಒಡೆಯುತ್ತಿದೆ. ಬಿಜೆಪಿ ಭಿತ್ತಿದ ಈ ರೋಗ, ಅಂಟುಜಾಡ್ಯದಂತೆ ಹರಡುತ್ತಾ ದೇಶವನ್ನು ಛಿದ್ರಗೊಳಿಸುವಂತಿದೆ. ಭಾರತದ ಏಕತೆಗೆ ಇದು ಅಪಾಯಕಾರಿ ಎಂದು ಆತಂಕ ಹೊರಹಾಕಿದ್ದಾರೆ.
h d kumaraswamy tweet about kiccha sudeep statement







