ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಕೈ ಕೊಟ್ಟಿದ್ದು, ರೈತರು ಸೇರಿದಂತೆ ಜನರು ಕೂಡ ಕಂಗಾಲಾಗಿದ್ದಾರೆ.
ಕೆಲವೆಡೆಯಂತೂ ಮಳೆಯ ಇಲ್ಲದಾಗಿದೆ. ಹೀಗಿಗ ಅನೇಕ ಡ್ಯಾಂಗಳು ಬರಿದಾಗಿದ್ದು ರಾಜ್ಯಕ್ಕೆ ನೀರಿನ ಕೊರತೆ ಸೃಷ್ಟಿಯಾಗಿದೆ(Water Crisis). ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಈ ನಿಟ್ಟಿನಲ್ಲಿ ಸಹಜವಾಗಿ ರಾಜ್ಯ ರಾಜಧಾನಿ ಬೆಂಗಳೂರಿಗೂ ನೀರಿನ ಕೊರತೆ ಎದುರಾಗಿದೆ.
ದಿನದಿಂದ ದಿನಕ್ಕೆ ಕೆಆರ್ಎಸ್ ನೀರಿನ ಮಟ್ಟ ಇಳಿಯುತ್ತಿದೆ. ಜೂನ್ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಆಗಿಲ್ಲ. ಜುಲೈ ತಿಂಗಳು ಆರಂಭವಾದರೂ ಮುಂಗಾರು ಚುರುಕಾಗಿಲ್ಲ. ಸದ್ಯ ರಾಜ್ಯಕ್ಕೆ ಜೂನ್ ತಿಂಗಳಲ್ಲಿ ಆಗಬೇಕಿದ್ದ ವಾಡಿಕೆಯಷ್ಟು ಮಳಾಗಿಲ್ಲ. ಸಹಜವಾಗಿ ನೀರಿನ ಕೊರತೆ ಉಂಟಾಗುತ್ತಿದೆ.
ಇಲ್ಲಿಯವರೆಗೆ ರಾಜ್ಯದಲ್ಲಿ 20 ಸೆಂ.ಮೀ ಮಳೆಯಾಗಬೇಕು. ಆದರೆ, ಇಲ್ಲಿಯವರೆಗೂ ರಾಜ್ಯದಲ್ಲಿ ಕೇವಲ 9 ಸೆ.ಮೀನಷ್ಟು ಮಾತ್ರ ಮಳೆಯಾಗಿದೆ. ಹೀಗಾಗಿ ಶೇ. 53ರಷ್ಟು ಮಳೆಯ ಕೊರತೆ ಎದುರಾಗಿದೆ. ಕರಾವಳಿಗೆ ವಾಡಿಕೆಯಂತೆ ಶೇ.48ರಷ್ಟು ಕಡಿಮೆ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಸೇ. 54ರಷ್ಟು ಮಳೆಯ ಕೊರತೆ ಎದುರಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ. 56ರಷ್ಟು ಮಳೆಯ ಕೊರತೆಯಾಗಿದೆ. ಹೀಗಾಗಿ ರಾಜ್ಯದ ಎಲ್ಲೆಡೆ ಕುಡಿಯುವ ನೀರಿನ ಕೊರತೆ ಈಗಿನಿಂದಲೇ ಶುರುವಾಗಿದೆ.








