ಹ್ಯಾಪಿ ಬರ್ತ್ ಡೇ ಜಿಂಕ್ಸ್… ಹಳ್ಳಿ ಹೈದ ಟೀಮ್ ಇಂಡಿಯಾ ಕ್ರಿಕೆಟಿಗನಾದ ಕಥೆಯೇ ರೋಚಕ…!

1 min read
ajinkya rahane saakshatv team india

ಹ್ಯಾಪಿ ಬರ್ತ್ ಡೇ ಜಿಂಕ್ಸ್… ಹಳ್ಳಿ ಹೈದ ಟೀಮ್ ಇಂಡಿಯಾ ಕ್ರಿಕೆಟಿಗನಾದ ಕಥೆಯೇ ರೋಚಕ…!

ajinkya rahane saakshatv team india ಏಳರ ಹರೆಯದಲ್ಲಿ ಶುರುವಾಯ್ತು ಕ್ರಿಕೆಟ್ ಮೇಲಿನ ಆಕರ್ಷಣೆ. 17 ನೇ ಹರೆಯದ ತನಕ ಮಾಡಿದ್ದು ಬರೀ ಆಲೋಚನೆ. 25ರ ಹರೆಯದ ತನಕ ಮಾಡ್ತಾ ಇದ್ದದ್ದು ಕೇವಲ ಆರಾಧನೆ. ಇದೀಗ ವಿಶ್ವ ಕ್ರಿಕೆಟ್ನಲ್ಲಿ ಮಾಡುತ್ತಿರುವುದು ಊಹೆಗೂ ನಿಲುಕದ ಆಲಾಪನೆ. ಹೌದು, ಕ್ರಿಕೆಟ್ ಬದುಕಿನ ಪ್ರಮುಖ ನಾಲ್ಕು ಘಟ್ಟಗಳನ್ನು ದಾಟಿ ಬಂದ ಆಟಗಾರನೇ ಅಜಿಂಕ್ಯಾ ರಹಾನೆ.
ನಿಜ, ಅಜಿಂಕ್ಯಾ ರಹಾನೆಗೆ ಬುದ್ಧಿ ಬರುವಾಗಲೇ ಭಾರತದಲ್ಲಿ ಕ್ರಿಕೆಟ್ ಅನ್ನೋದು ಧರ್ಮವಾಗಿ ಪಸರಿಸಿತ್ತು. ಸಹಜವಾಗಿಯೇ ಕ್ರಿಕೆಟ್ ಮೇಲೆ ಆಕರ್ಷಣೆಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಆದ್ರೆ ಮುಂಬೈನ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಅಜಿಂಕ್ಯಾ ರಹಾನೆಗೆ ಕ್ರಿಕೆಟಿಗನಾಗುವುದು ಗಗನ ಕುಸುಮವಾಗಿತ್ತು. ಆದ್ರೆ ಅಜಿಂಕ್ಯಾ ತಂದೆ ಬಾಬು ರಾವ್ ರಹಾನೆ ಮಗನ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಚಿವುಟಿ ಹಾಕಲಿಲ್ಲ. ಏಳರ ಹರೆಯದಲ್ಲೇ ಕ್ರಿಕೆಟ್ ಅಕಾಡೆಮಿಗೆ ಸೇರಿದಾಗ, ಅಜಿಂಕ್ಯಾ ರಹಾನೆಗೆ ಭವಿಷ್ಯದ ಟೀಮ್ ಇಂಡಿಯಾದ ಆಟಗಾರನಾಗಬೇಕು ಅನ್ನೋ ಅಲೋಚನೆ ಮೂಡಿತ್ತು. ಆದ್ರೆ 17ರ ಹರೆಯದ ತನಕ ರಹಾನೆಗೆ ಸರಿಯಾದ ಮಾರ್ಗದರ್ಶನ ಸಿಗಲಿಲ್ಲ. ಇದ್ರಿಂದ ಕ್ರಿಕೆಟಿಗನಾಗಬೇಕು ಅನ್ನೋ ಆಸೆ ಕೇವಲ ಆಕರ್ಷಣೆ ಹಾಗೂ ಆಲೋಚನೆಗೆ ಸೀಮಿತವಾಯ್ತು.
ajinkya rahane saakshatv team india ಆದ್ರೆ ವಿಧಿ ಬರೆಹ ಬೇರೆನೇ ಇತ್ತು. 17ನೇ ಹರೆಯದಲ್ಲಿ ಅಜಿಂಕ್ಯಾ ರಹಾನೆಗೆ ಸೂಕ್ತ ಮಾರ್ಗದರ್ಶಕನ ದರ್ಶನವಾಯ್ತು. ಟೀಮ್ ಇಂಡಿಯಾದ ಮಾಜಿ ಆಟಗಾರ ಪ್ರವೀಣ್ ಆಮ್ರೆ ರಹಾನೆಯ ಪ್ರತಿಭೆಯನ್ನು ಗುರುತಿಸಿದ್ರು. ಜತೆಗೆ ತರಬೇತಿಯನ್ನು ನೀಡಿದ್ರು. ನಂತರ ಅಜಿಂಕ್ಯಾ ಹಿಂತಿರುಗಿ ನೋಡಲೇ ಇಲ್ಲ. ಕ್ರಿಕೆಟ್ ಆಟವನ್ನು ದಿನವಿಡಿ ಆರಾಧನೆ ಮಾಡಿದ್ರು. ಕ್ರಿಕೆಟ್ ದಿಗ್ಗಜರ ನೆರಳಿನಲ್ಲಿ ಹೆಜ್ಜೆಯನ್ನಿಟ್ಟುಕೊಂಡು ಮುನ್ನಡೆದ್ರು. ಅದ್ರಲ್ಲೂ ದ್ರಾವಿಡ್ ಮತ್ತು ಲಕ್ಷ್ಮಣ್ ಆಟದ ಶೈಲಿಯನ್ನು ಪರವಶ ಮಾಡಿಕೊಂಡ್ರು. ಅಲ್ಲದೆ 19 ವಯೋಮಿತಿ ತಂಡದಲ್ಲಿ ಸ್ಥಾನ ಪಡೆದು ಶತಕದ ಮೇಲೆ ಶತಕ ಸಿಡಿಸಿದ್ರು. ಪರಿಣಾಮ ಮುಂಬೈ ರಣಜಿ ತಂಡಕ್ಕೂ ಸೇರ್ಪಡೆಯಾದ್ರು.
2007ರ ರಣಜಿ ಋತುವಿನಲ್ಲಿ ಅಜಿಂಕ್ಯಾ ರಹಾನೆಯ ಆಟಕ್ಕೆ ದೇಸಿ ಬೌಲರ್ ಗಳು ಕೂಡ ಮನ ಸೋತಿದ್ರು. ತಾಂತ್ರಿಕವಾಗಿ ಹಾಗೂ ರಕ್ಷಣಾತ್ಮಕ ಆಟದ ಮೂಲಕ ಗಮನ ಸೆಳೆದ ರಹಾನೆ, ದೇಸಿ ಕ್ರಿಕೆಟ್ ನಲ್ಲಿ ರನ್ ಮಳೆಯನ್ನೇ ಸುರಿಸಿದ್ರು. ಜತೆಗೆ ದುಲೀಪ್ ಟ್ರೋಪಿ, ಇರಾನಿ ಟ್ರೋಪಿ ಸೇರಿದಂತೆ ವಿವಿಧ ದೇಸಿ ಟೂರ್ನಿಗಳಲ್ಲಿ ರನ್ ಹೊಳೆಯನ್ನೇ ಹರಿಸಿದ್ರು. ದೇಸಿ ಟೂರ್ನಿಗಳಲ್ಲಿ ರನ್ ಮೆಷಿನ್ ಎಂದೇ ಖ್ಯಾತಿ ಪಡೆದಿದ್ದ ರಹಾನೆ ಯಾವುದೇ ಮುಲಾಜಿಲ್ಲದೆ ಟೀಮ್ ಇಂಡಿಯಾದ ಕದ ತಟ್ಟಿದ್ರು. ಅಲ್ಲದೆ 2011ರ ಇಂಗ್ಲೆಂಡ್ ವಿರುದ್ಧದ ನ್ಯಾಟ್ವೆಸ್ಟ್ ಸರಣಿಗೂ ಆಯ್ಕೆಯಾದ್ರು. ಜತೆಗೆ ವೆಸ್ಟ್ ಇಂಡಿಸ್ ವಿರುದ್ಧದ ಟೆಸ್ಟ್ ಸರಣಿಗೂ ಆಯ್ಕೆಯಾದ್ರು. ಹೀಗೆ ಹಳ್ಳಿ ಹೈದ ಅಜಿಂಕ್ಯಾ ರಹಾನೆ, ಕ್ರಿಕೆಟ್ ಆಕರ್ಷಣೆ, ಆಲೋಚನೆ, ಆರಾಧನೆಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ರೂಪುಗೊಂಡ್ರು.
ಆದ್ರೆ ಅಜಿಂಕ್ಯಾ ರಹಾನೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಲಾಪನೆ ಮಾಡಲು ಸಾಕಷ್ಟು ಸಮಯಬೇಕಾಯ್ತು. ಹಿರಿಯ ಆಟಗಾರರ ಒಡ್ಡೋಲಗದಿಂದಾಗಿ ರಹಾನೆಗೆ ಆರಂಭದಲ್ಲಿ ಹೆಚ್ಚು ಅವಕಾಶಗಳು ಸಿಗುತ್ತಿರಲಿಲ್ಲ. 11ರ ಬಳಗದಲ್ಲಿ ಕಾಣಿಸಿಕೊಳ್ಳುವುದು ಅಪರೂಪವೇ ಆಗಿತ್ತು. ಆದ್ರೂ ರಹಾನೆ ತಲೆಕೆಡಿಸಿಕೊಳ್ಳಲಿಲ್ಲ. ಹಿರಿಯ ಆಟಗಾರರ ಮಾರ್ಗದರ್ಶನ, ಸಲಹೆಗಳನ್ನು ತಳ್ಳಿ ಹಾಕಲಿಲ್ಲ. ಪ್ರತಿ ಪಂದ್ಯ, ಪ್ರತಿ ನೆಟ್ ಅಭ್ಯಾಸಗಳು ರಹಾನೆಯ ಮನೋಬಲವನ್ನು ಹೆಚ್ಚಿಸಿದವು. ಸಿಕ್ಕ ಪಂದ್ಯಗಳನ್ನು ಸರಿಯಾಗಿಯೇ ಬಳಸಿಕೊಳ್ಳುವುದನ್ನು ಮರೆಯಲಿಲ್ಲ. ಜತೆಗೆ ಟಿ-ಟ್ವೆಂಟಿ, ಐಪಿಎಲ್ ಟೂರ್ನಿಗಳು ರಹಾನೆಯ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿದ್ದವು.
ಅದೇನೋ ಅಂತರಲ್ಲ. ಕಾಯುವಿಕೆಗೂ ಅರ್ಥವಿದೆ ಅಂತ. ಹಾಗೇ ಈ ಮಾತು ರಹಾನೆ ಕ್ರಿಕೆಟ್ ಬದುಕಿಗೂ ಅನ್ವಯವಾಗುತ್ತೆ. ದೇಸಿ ಪಂದ್ಯಗಳಲ್ಲಿ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಗಮನ ಸೆಳೆದಿದ್ದ ಅಜಿಂಕ್ಯಾ ರಹಾನೆಗೆ ಕೊನೆಗೂ ಟೆಸ್ಟ್ ಕ್ಯಾಪ್ ಧರಿಸುವ ಅವಕಾಶ ಸಿಕ್ಕಿಬಿಟ್ಟಿತ್ತು, ಸುಮಾರು 16 ತಿಂಗಳ ಕಾಯುವಿಕೆಗೆ ಫಲ ಸಿಕ್ಕಿತ್ತು. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದೆಹಲಿಯಲ್ಲಿ ಅಜಿಂಕ್ಯಾ ರಹಾನೆ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ರು. ಆದ್ರೆ ಮೊದಲ ಪಂದ್ಯದಲ್ಲಿ ರಹಾನೆ ನಿರಾಸೆಗೊಂಡಿದ್ದರು.
ಬಳಿಕ 2013ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ಭಾರತದ ಮಾನ ಕಾಪಾಡಿದ್ದು ಅಜಿಂಕ್ಯಾ ರಹಾನೆ. 12ನೇ ಆಟಗಾರನಾಗಿ ಡ್ರಿಂಕ್ಸ್ ತೆಗೆದುಕೊಂಡು ಹೋಗುತ್ತಿದ್ದ ಆಟಗಾರ, ಡ್ರೆಸಿಂಗ್ ರೂಂನಲ್ಲೇ ಹೆಚ್ಚು ಸಮಯ ಕಾಲ ಕಳೆಯುತ್ತಿದ್ದ ಆಟಗಾರ, ನೆಟ್ಸ್ ಅಭ್ಯಾಸಕ್ಕೆ ಸೀಮಿತವಾಗಿದ್ದ ಆಟಗಾರ. ಆದ್ರೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ರೀತಿಗೆ ಕ್ರಿಕೆಟ್ ಜಗತ್ತು ಅಚ್ಚರಿಗೊಂಡಿದ್ದು ಸುಳ್ಳಲ್ಲ. ಅಲ್ಲದೆ, ಹರಿಣಗಳ ವೇಗದ ಪಿಚ್ ನಲ್ಲಿ ಆಡಿದ ರೀತಿ ಕೂಡ ಕ್ರಿಕೆಟ್ ಪಂಡಿತರನ್ನು ಚಕಿತಗೊಳಿಸಿತ್ತು. ಹೀಗೆ ವಿದೇಶಿ ನೆಲದಲ್ಲಿ ತನ್ನ ಸವಾರಿಯನ್ನು ajinkya rahane saakshatv team india ಆರಂಭಿಸಿದ್ದ ರಹಾನೆ ಪಂದ್ಯದಿಂದ ಪಂದ್ಯಕ್ಕೆ ಪರಿಪಕ್ವತೆಯನ್ನು ಪಡೆದುಕೊಂಡ್ರು.
ಇನ್ನು 2014ರಲ್ಲಿ ನ್ಯೂಜಿಲೆಂಡ್ ನ ಬೌನ್ಸಿ ಪಿಚ್ ನಲ್ಲೂ ಟೀಮ್ ಇಂಡಿಯಾದ ಮಾನ ಕಾಪಾಡಿದ್ದು ಕೂಡ ರಹಾನೆ. ವೆಲ್ಲಿಂಗ್ಟನ್ ಟೆಸ್ಟ್ ನಲ್ಲಿ ಚೊಚ್ಚಲ ಟೆಸ್ಟ್ ಶತಕದ ರುಚಿಕಂಡ್ರು. ನಂತ್ರ ಇಂಗ್ಲೆಂಡ್ ಸರಣಿಯ ವೇಳೆಯಲ್ಲೂ ಟೀಮ್ ಇಂಡಿಯಾ ಸಂಕಷ್ಟದಲ್ಲಿದ್ದಾಗ ಶತಕ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದ್ರು. ಆನಂತರ 2015 ಲಂಕಾ ಸರಣಿಯಲ್ಲೂ ತನ್ನ ಬ್ಯಾಟ್ ಝಳಪಿಸಿದ ರಹಾನೆ ಗಾಲೆಯಲ್ಲಿ ಶತಕ ಸಿಡಿಸಿ ಟೀಮ್ ಇಂಡಿಯಾದ ಆಪತ್ಭಾಂದವರಾದ್ರು.
ನಂತರ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ರನ್ ಗಳಿಸಲು ಒದ್ದಾಟ ನಡೆಸಿತ್ತು. ಆದ್ರೆ ದೆಹಲಿ ಟೆಸ್ಟ್ ಪಂದ್ಯದಲ್ಲಿ ಸತತ ಎರಡು ಇನ್ಸಿಂಗ್ಸ್ ಗಳಲ್ಲೂ ಶತಕ ದಾಖಲಿಸಿ ಹೊಸ ದಾಖಲೆ ಬರೆದ್ರು. ಎರಡು ಇನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ ಭಾರತದ ಐದನೇ ಆಟಗಾರನಾಗಿ ಹೊರಹೊಮ್ಮಿದ್ರು.
ಒಟ್ಟಿನಲ್ಲಿ ರಹಾನೆ ಅವರು ಟೀಮ್ ಇಂಡಿಯಾ ಟೆಸ್ಟ್ ತಂಡದ ಉಪನಾಯಕನಾಗಿ, ಆಟಗಾರನಾಗಿ, ಕೆಲವು ಪಂದ್ಯಗಳಿಗೆ ನಾಯಕನಾಗಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಅಲ್ಲದೆ ಕಳೆದ ಆಸ್ಟ್ರೇಲಿಯಾ ಸರಣಿಯಲ್ಲಿ ಮರ್ಯಾದೆ ಕಳೆದುಕೊಂಡಿದ್ದ ಟೀಮ್ ಇಂಡಿಯಾದ ಘನತೆಯನ್ನು ಉಳಿಸಿದ್ದು ಕೂಡ ರಹಾನೆಯವರ ನಾಯಕತ್ವದ ಆಟ.. ಆಸ್ಟ್ರೇಲಿಯನ್ನರನ್ನು ಅವರದ್ದೇ ನೆಲದಲ್ಲಿ ಸೋಲಿಸಿದ್ದ ಹೆಗ್ಗಳಿಕೆ ಕೂಡ ರಹಾನೆಗೆ ಸಲ್ಲುತ್ತದೆ.
ajinkya rahane saakshatv team india ಸದ್ಯ 73 ಟೆಸ್ಟ್ ಪಂದ್ಯಗಳಲ್ಲಿ 12 ಶತಕ ಹಾಗೂ 23 ಅರ್ಧಶತಕಗಳ ನೆರವಿನಿಂದ ಸರಾಸರಿ 41 ರಂತೆ 4583 ರನ್ ದಾಖಲಿಸಿದ್ದಾರೆ. ಹಾಗೇ ಏಕದಿನ ಕ್ರಿಕೆಟ್ನಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿಯ ವಕ್ರ ದೃಷ್ಟಿಗೆ ಬಿದ್ದಿರುವುದು ಗೊತ್ತಿಲ್ಲದ ಸಂಗತಿಯೇನೂ ಆಗಿರಲಿಲ್ಲ. ಆದ್ರೂ ಜಿಂಬಾಬ್ವೆ ಸರಣಿಗೆ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡು ಸರಣಿ ಗೆದ್ದ ಹಿರಿಮೆಗೂ ಪಾತ್ರರಾಗಿದ್ದಾರೆ. ಇಲ್ಲಿಯ ತನಕ 90 ಏಕದಿನ ಪಂದ್ಯಗಳನ್ನು ಆಡಿರುವ ರಹಾನೆ 2962ರನ್ ಪೇರಿಸಿದ್ದಾರೆ. ಜತೆಗೆ ಮೂರು ಶತಕ ಹಾಗೂ 24 ಅರ್ಧಶತಕಗಳನ್ನು ದಾಖಲಿಸಿದ್ದಾರೆ.
ಅಂದ ಹಾಗೇ, ಅಜಿಂಕ್ಯಾ ರಹಾನೆ ಅದ್ಭುತ ಫೀಲ್ಡರ್ ಕೂಡ ಹೌದು. ಮೈದಾನದಲ್ಲಿ ಚಿಗರೆಯಂತೆ ಓಡಾಡುವ ರಹಾನೆ ಲಂಕಾ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಏಳು ಕ್ಯಾಚ್‍ಗಳನ್ನು ಹಿಡಿದು ವಿಶ್ವ ದಾಖಲೆ ಕೂಡ ಬರೆದಿದ್ದಾರೆ. ಅದ್ರಲ್ಲೂ ಸ್ಲಿಪ್ ಮತ್ತು ಗಲ್ಲಿಗಳಲ್ಲಿ ಅದ್ಭುತ ಕ್ಷೇತ್ರ ರಕ್ಷಣೆ ಮಾಡುವ ರಹಾನೆ ಅಂದ್ರೆ ಹಾಲಿ ನಾಯಕ ವಿರಾಟ್ ಕೊಹ್ಲಿಗೆ ಎಲ್ಲಿಲ್ಲದ ಅಕ್ಕರೆ. ಹಾಗೇ ನೋಡಿದ್ರೆ ರಹಾನೆಗೆ ಹೆಚ್ಚು ಅವಕಾಶವನ್ನು ನೀಡಿದ್ದು ಕೂಡ ವಿರಾಟ್ ಕೊಹ್ಲಿಯೇ. ಅಂಬಾಟಿ ರಾಯುಡು ಮೇಲಿನ ಪ್ರೀತಿಯಿಂದ ಧೋನಿ ರಹಾನೆಗೆ ಹೆಚ್ಚು ಅವಕಾಶ ನೀಡುತ್ತಿರಲಿಲ್ಲ. ಆದ್ರೆ ಎಲ್ಲದಕ್ಕೂ ಸಮಯ ಅಂತ ಒಂದು ಇದೆಯಲ್ಲಾ.. ಎಲ್ಲದಕ್ಕೂ ಉತ್ತರ ನೀಡುವಂತೆ ರಹಾನೆ ಎಲ್ಲದಕ್ಕೂ ಉತ್ತರ ನೀಡುತ್ತಿದ್ದಾರೆ.
ajinkya rahane saakshatv team india ನಿಜ, ಕಳೆಗುಂದಿದ್ದ ಟೀಮ್ ಇಂಡಿಯಾಗೆ ಅಜಿಂಕ್ಯಾ ರಹಾನೆ ಭರವಸೆಯ ಬೆಳಕಾಗುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಪ್ರಖರವಾಗಿ ಹೊಳೆಯುತ್ತಿದ್ದಾರೆ. ಆಧುನಿಕ ಕ್ರಿಕೆಟ್ ನಲ್ಲೂ ನೈಜತೆಯ ಜತೆ ಕಲಾತ್ಮಕತೆಯನ್ನು ಮೈಗೂಡಿಸಿಕೊಂಡಿದ್ದಾರೆ. ಮೂರು ಮಾದರಿಯ ಆಟದಲ್ಲೂ ನಿಖರತೆಯನ್ನು ಕಾಯ್ದುಕೊಂಡಿದ್ದಾರೆ.ನಿರಂತರವಾಗಿ ರನ್ ಹರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ತಾಳ್ಮೆಯೊಂದಿಗೆ ಅಬ್ಬರದ ಆಟಕ್ಕೂ ಸೈ ಎನಿಸಿಕೊಂಡಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಆಡುವ ಗುಣವನ್ನು ಕಲಿತುಕೊಂಡಿದ್ದಾರೆ. ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ರೋಷ, ಆಕ್ರಮಣಕಾರಿ ಪ್ರವೃತ್ತಿ ಆಟದಲ್ಲಿರಬೇಕೇ ಹೊರತು ಅದನ್ನು ಬಹಿರಂಗೊಳಿಸಬಾರದು ಅಂತ ಆಟಗಾರರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ. ಒಟ್ಟಿನಲ್ಲಿ ಬದ್ಧತೆ, ಪರಿಶ್ರಮ, ಕ್ರಿಕೆಟ್ ಮೇಲಿನ ಪ್ರೀತಿಯಿಂದ ಅಜಿಂಕ್ಯಾ ವಿಶ್ವ ಕ್ರಿಕೆಟ್ ನಲ್ಲಿ ರಾರಾಜಿಸುತ್ತಿದ್ದಾರೆ. ಅಂದ ಹಾಗೇ ಅಜಿಂಕ್ಯ ರಹಾನೆ ಇಂದು 33ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹ್ಯಾಪಿ ಬರ್ತ್ ಡೇ ರಹಾನೆ.. !

ajinkya rahane saakshatv team india ಏನೇ ಇರಲಿ, ಆಧುನಿಕ ಕ್ರಿಕೆಟ್ನಲ್ಲಿ ಅಜಿಂಕ್ಯಾ ರಹಾನೆಯ ಬ್ಯಾಟಿಂಗ್ನಲ್ಲಿ ಗತ ಕಾಲದ ಬ್ಯಾಟಿಂಗ್ ವೈಖರಿಯನ್ನು ಕಾಣಬಹುದಾಗಿದೆ. ದ್ರಾವಿಡ್ ಹಾಗೂ ಲಕ್ಷ್ಮಣ್ ತಾಂತ್ರಿಕತೆ ಹಾಗೂ ಕಲಾತ್ಮಕತೆಯನ್ನು ರಹಾನೆಯ ಬ್ಯಾಟಿಂಗ್ನಲ್ಲಿ ನೋಡಬಹುದಾಗಿದೆ. ಹೊಡಿಬಡಿಯ ಆಟದಲ್ಲಿ ಮೈಮರೆತಿರುವ ಯುವ ಆಟಗಾರರಿಗೆ ರಹಾನೆ ದಾರಿದೀಪ. ಯಾಕಂದ್ರೆ ರಹಾನೆ ಟೆಸ್ಟ್ ಕ್ರಿಕೆಟ್ನ ಸಂಪ್ರದಾಯವನ್ನು ಮುರಿದಿಲ್ಲ. ಏಕದಿನ ಕ್ರಿಕೆಟ್ನ ವೇಗಕ್ಕೂ ದಕ್ಕೆಯಾಗಲಿಲ್ಲ. ಟಿ-ಟ್ವೆಂಟಿ ಕ್ರಿಕೆಟ್ನ ಅಬ್ಬರಕ್ಕೂ ಕಮ್ಮಿ ಏನು ಇಲ್ಲ. ಏನೇ ಆದ್ರೂ ಅಜಿಂಕ್ಯಾ ರಹಾನೆ ಈಗ ಟೀಮ್ ಇಂಡಿಯಾ ಪಾಲಿಗೆ ಗ್ಲೋಬಲ್ ವಾರಿಯರ್.
ಸನತ್ ರೈ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd