ಅನಂತವಾಗಿರು ವಿಜಯ್.. ಇಂದು ಸಂಚಾರಿ ವಿಜಯ್ ಜನ್ಮದಿನ
ಬೆಂಗಳೂರು : ತಮ್ಮ ಮನೋಜ್ಞ ಅಭಿನಯದ ಮೂಲಕ ಜನರ ಮನದಲ್ಲಿ ಒಂದು ಪ್ರತ್ಯೇಕವಾದ ಸ್ಥಾನ ಪಡೆದಿದ್ದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇಂದು ನಮ್ಮೊಂದಿಗಿಲ್ಲ. ಆದರೂ, ಇಂದು ಅವರ ಹುಟ್ಟುಹಬ್ಬಕ್ಕೆ ಅವರನ್ನು ಪ್ರೀತಿಸುವ ಅಭಿಮಾನಿ ಬಳಗಕ್ಕೆ ಚಿತ್ರರಂಗ ಉಡುಗೊರೆಗಳನ್ನು ನೀಡಿದೆ.
ಇಂದು ನಟ ಸಂಚಾರಿ ವಿಜಯ್ ಅವರ 38 ನೇ ವರ್ಷದ ಹುಟ್ಟುಹಬ್ಬ. ಹೆಜ್ಜೆ ಹೆಜ್ಜೆಗೂ ದುರ್ಗಮ ಹಾದಿಯಲ್ಲಿ ಸಂಚರಿಸುತ್ತ ತಮ್ಮ ಸಹಜ ನಟನೆಯಿಂದ ಕೀರ್ತಿಯ ಉತ್ತುಂಗಕ್ಕೇರಿದ ನಟ ಸಂಚಾರಿ ವಿಜಯ್. ಇವರ ಮೂಲ ಹೆಸರು ವಿಜಯ್ ಕುಮಾರ್ ಬಿ. ತಂದೆ ಬಸವರಾಜಯ್ಯ ತಾಯಿ ಗೌರಮ್ಮ. ಜುಲೈ 17 , 1983ರಂದು ಜನಿಸಿದ ಇವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದವರು.
ಸಂಚಾರಿ ವಿಜಯ್ ಆಸಕ್ತಿ ಮತ್ತು ಶ್ರದ್ಧೆ ಇದ್ದರೆ ಒಬ್ಬ ವ್ಯಕ್ತಿ ಯಾವ ಮಟ್ಟಕ್ಕೆ ಬೆಳೆಯಬಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ನಿಂತವರು.
ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ಕೆಲ ಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಬಾಲ್ಯದಿಂದಲೇ ರಂಗಭೂಮಿಯ ಕುರಿತಾಗಿ ಅಪಾರವಾದ ಆಸಕ್ತಿಯನ್ನು ಹೊಂದಿದ್ದ ವಿಜಯ್ ನಂತರ ಉಪನ್ಯಾಸ ವೃತ್ತಿಗೆ ಗುಡ್ ಬೈ ಹೇಳಿ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಸಂಚಾರಿ ಥಿಯೇಟರ್ ಜೊತೆ 10 ವರ್ಷಗಳ ನಂಟನ್ನು ಹೊಂದಿದ್ದ ವಿಜಯ್ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪುನ್ನು ಮೂಡಿಸಲು ಸಫಲರಾಗುತ್ತಾರೆ. ಒಂದೆಡೆ ರಂಗಭೂಮಿಯಲ್ಲಿ ಹೆಸರು ಮಾಡುತ್ತಾ ಇನ್ನೊಂದೆಡೆ ಸಿನಿಮಾಗಳಲ್ಲೂ ನಟಿಸಲು ಪ್ರಾರಂಭಿಸುತ್ತಾರೆ.
ಅದೇ ಸಮಯದಲ್ಲಿ ಕೈಲಾಸಂ ಅವರು ಬರೆದಿದ್ದ ಕೈಲಾಸಂ ಕೀಚಕ ನಾಟಕದಲ್ಲಿ ಸಣ್ಣ ಪಾತ್ರ ಬೃಹನ್ನಳೆಯಾಗಿ ನಟಿಸಲು ಒಪ್ಪಿಕೊಳ್ಳುತ್ತಾರೆ. ಈ ಪಾತ್ರದಲ್ಲಿನ ಅವರ ಅಭಿನಯ ಜನರ ಮನಸ್ಸನ್ನು ಅದೆಷ್ಟರ ಮಟ್ಟಿಗೆ ಸೂರೆಗೊಂಡಿತು ಎಂದರೆ ಅದು ವಿಜಯ್ ಅಲ್ಲ ಬೃಹನ್ನಳೆ ಎಂದು ಭಾವಿಸುವಂತೆ ಅವರ ನಟನೆ ಇತ್ತು.
ಆ ಸಮಯದಲ್ಲಿ ಪುರುಷನೋರ್ವ ಲಿಂಗ ಬದಲಾವಣೆ ಮಾಡಿಸಿಕೊಂಡು ಮಹಿಳೆಯಾಗಿ ಬದಲಾಗಿ ಸಮಾಜದಲ್ಲಿ ಎದುರಿಸುವ ಸಮಸ್ಯೆಗಳ ಸೂಕ್ಷ್ಮ ಅಂಶಗಳ ‘ನಾನು ಅವನಲ್ಲ ಅವಳು’ ಸಿನಿಮಾದ ಪ್ರಮುಖ ಪಾತ್ರಧಾರಿಯ ಹುಡುಕಾಟದಲ್ಲಿ ತೊಡಗಿದ್ದ ಬಿ.ಎಸ್ ಲಿಂಗದೇವರು ಅವರಿಗೆ ಸಂಚಾರಿ ವಿಜಯ್ ಅಭಿನಯಿಸಿದ ಬೃಹನ್ನಳೆ ಪಾತ್ರದ ಬಗ್ಗೆ ತಿಳಿಯುತ್ತದೆ.
2015ರಲ್ಲಿ ತೆರೆಕಂಡ ‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿನ ತೃತೀಯ ಲಿಂಗಿ ಪಾತ್ರ ವಿಜಯ್ ಅವರ ಸಿನಿಮಾ ಬದುಕಿಗೆ ದೊಡ್ಡ ಬ್ರೇಕ್ ಕೊಡುತ್ತದೆ. ಈ ಪಾತ್ರದಲ್ಲಿನ ಅವರ ನಟನೆಗೆ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಹಾಗೂ ಫಿಲ್ಮ್ ಫೇರ್ ಕ್ರಿಟಿಕ್ಸ್ ಅವಾರ್ಡ್ ನಂಥ ಪ್ರಶಸ್ತಿಗಳು ಒಲಿದುಬರುತ್ತವೆ. ಕನ್ನಡ ಸಿನಿಮಾ ಇತಿಹಾಸದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಮೂರನೇ ನಟ ಎಂಬ ಖ್ಯಾತಿಗೆ ಪಾತ್ರರಾಗುತ್ತಾರೆ.
ಮನೋಜ್ಞ ಅಭಿನಯದ ಜೊತೆಗೆ ಸಾಮಾಜಿಕ ಕಳಕಳಿಯುಳ್ಳ ನಟನಾಗಿದ್ದ ವಿಜಯ್ ತಮ್ಮನ್ನು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು. ಕೆಲವು ವರ್ಷಗಳ ಹಿಂದೆ ಕೊಡಗು ಭೀಕರ ಪ್ರವಾಹಕ್ಕೆ ಈಡಾದಾಗ ತಾವೇ ಸ್ವತಃ ಫಿಲ್ಡ್ ಗಿಳಿದು ಕೆಲಸ ಮಾಡಿದ್ದರು. ಕಳೆದೆರೆಡು ವರ್ಷಗಳಿಂದ ಜನರ ಬದುಕನ್ನು ಹೈರಾಣಾಗಿಸಿರುವ ಕೊರೋನಾ ಸೋಂಕಿನಿಂದ ಸಂಕಷ್ಟಕೊಳಗಾದವರ ನೆರವಿಗೆ ನಿಂತಿದ್ದರು. ಉಸಿರು ಎಂಬ ಸಂಘ ಕಟ್ಟಿ ಕೊರೋನಾ ಸೋಂಕಿತರಿಗೆ ಅಮ್ಲಜನಕ ಸಾಂದ್ರಕವನ್ನು ಪೂರೈಸುತ್ತಿದ್ದರು.
ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದ ನಟ ಸಂಚಾರಿ ವಿಜಯ್ ಜೂನ್ 12 ರ ರಾತ್ರಿಯಂದು ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕಲಾ ಜೀವನಕ್ಕೆ ಶಾಶ್ವತವಾದ ತೆರೆ ಎಳೆದು ಸಂಚಾರವನ್ನು ಮುಗಿಸಿದ್ದಾರೆ.
ಅಂದಹಾಗೆ ಸಂಚಾರಿ ವಿಜಯ್ ಸಾವಿಗೂ ಮುನ್ನ ಐದಾರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು. ಈ ಸಿನಿಮಾಗಳ ಸಾಲಿನಲ್ಲಿ ಬಹು ನಿರೀಕ್ಷಿತ ಚಿತ್ರ ಪಿರಂಗಿಪುರ ಕೂಡ ಒಂದು. ಈ ಸಿನಿಮಾದಲ್ಲಿ ಸಂಚಾರಿ ವಿಜಯ್ ಪಾತ್ರ ಪರಿಚಯದ ಬಗ್ಗೆ, ಒಂದು ವಿಡಿಯೋ ಮತ್ತು ಪೋಸ್ಟರ್ ಅನ್ನು ಅನಾವರಣಗೊಳಿಸಿದೆ
ಜೊತೆಗೆ ವಿಜಯ್ ಅಭಿನಯದ ‘ಲಂಕೆ’ ಸಿನಿಮಾದ ಪೋಸ್ಟರ್ ನ್ನು ಚಿತ್ರತಂಡ ರಿಲೀಸ್ ಮಾಡಿದೆ.
ಇನ್ನು ಜೀವಿತಾವಧಿಯಲ್ಲಿ ಇತರರಿಗೆ ಸಹಾಯ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ್ ಅಂಗಾಂಗಗಳನ್ನು ದಾನಮಾಡಿ ಹಲವಾರು ಜನರ ಬಾಳಿಗೆ ಬೆಳಕು ನೀಡಿದ್ದಾರೆ. ಅವರು ಭೌತಿಕವಾಗಿ ನಮ್ಮಿಂದ ದೂರವಾದರೂ ಅಂಗದಾನ ಮಾಡಿ ಸದಾ ನಮ್ಮೊಡನೆ ಸಂಚರಿಸುವ ಸಂಚಾರಿ ವಿಜಯ್ ಅವರಿಗೆ ಜನ್ಮದಿನ ಶುಭಾಶಯಗಳು. ವಿ ಮಿಸ್ ಯೂ ಸರ್..!