Har Ghar Tiranga | ಗರಗ ಗ್ರಾಮದಲ್ಲಿ ಹರ್ ಘರ್ ತಿರಂಗಾ ಬಹಿಷ್ಕಾರ : ಸಿಎಂಗೆ ಸಿದ್ದು ಪ್ರಶ್ನೆ
ಬೆಂಗಳೂರು : ಖಾದಿ ಧ್ವಜಗಳ ಮೂಲ ಗರಗ ಗ್ರಾಮದಲ್ಲಿ ಹರ್ ಘರ್ ತಿರಂಗಾ ಬಹಿಷ್ಕಾರ ಮಾಡಿರುವ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಧ್ವಜ ಸಂಹಿತೆಗೆ ತಿದ್ದುಪಡಿ ತಂದು ಪಾಲಿಸ್ಟರ್ ಬಟ್ಟೆ ಬಳಕೆಗೂ ಅವಕಾಶ ನೀಡಿರುವುದರಿಂದ ಗರಗ ಖಾದಿ ಗ್ರಾಮದ್ಯೋಗ ಕೇಂದ್ರದ ನೂರಾರು ಕಾರ್ಮಿಕರು ಮುಷ್ಕರದಲ್ಲಿ ತೊಡಗಿರುವುದು ನಿಮ್ಮ ಗಮನಕ್ಕೆ ಬಂದಿದೆಯೇ ಬಸವರಾಜ ಬೊಮ್ಮಾಯಿ?
ಪಾಲಿಸ್ಟರ್ ಬಟ್ಟೆ ಬಳಸಲು ಅವಕಾಶ ನೀಡಿರುವುದು ರಾಷ್ಟ್ರಧ್ವಜವನ್ನು ಜನಪ್ರಿಯಗೊಳಿಸಲಿಕ್ಕಾಗಿಯೇ? ಇಲ್ಲವೇ ನಿಮ್ಮ ಪಕ್ಷದ ಪೋಷಕರಾದ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಿಕ್ಕಾಗಿಯೇ ಬಸವರಾಜ ಬೊಮ್ಮಾಯಿ?

ಪಾಲಿಸ್ಟರ್ ಬಟ್ಟೆಯಿಂದ ರಾಷ್ಟ್ರಧ್ವಜ ತಯಾರಿಕೆಗೆ ಅವಕಾಶ ನೀಡುವಾಗ ಇಡೀ ದೇಶಕ್ಕೆ ರಾಷ್ಟ್ರಧ್ವಜ ತಯಾರಿಸಿಕೊಡುತ್ತಿದ್ದ ಹುಬ್ಬಳ್ಳಿಯ ಬೆಂಗೇರಿ ಮತ್ತು ಧಾರವಾಡದ ಗರಗ ಖಾದಿ ಕೇಂದ್ರಗಳಿಗೆ ಆಗುವ ಅನ್ಯಾಯವನ್ನು ನೀವು ಪ್ರಧಾನ ಮಂತ್ರಿಗಳ ಗಮನಕ್ಕೆ ತರಲಿಲ್ಲವೇ ಬಸವರಾಜ ಬೊಮ್ಮಾಯಿ?
ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕರೆಯನ್ನು ಪಾಲಿಸುವ ಏಕೈಕ ಕಾರಣಕ್ಕಾಗಿ ಸಾಮಾನ್ಯ ಜನರಿಂದ ಬಲಾತ್ಕಾರವಾಗಿ ದುಡ್ಡು ಕಿತ್ತುಕೊಂಡು ರಾಷ್ಟ್ರಧ್ವಜವನ್ನು ಮಾರಾಟ ಮಾಡುತ್ತಿರುವ ನೀವು, ಈ ಮೂಲಕ ರಾಷ್ಟ್ರಧ್ವಜದ ಮೇಲಿನ ಗೌರವಕ್ಕೆ ಕುಂದುತರುತ್ತಿದ್ದೇವೆ ಎಂದು ನಿಮಗೆ ಅನಿಸುವುದಿಲ್ಲವೇ ಬಸವರಾಜ ಬೊಮ್ಮಾಯಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.