ವಿಚಿತ್ರ ವ್ಯಕ್ತಿತ್ವ… ಆದ್ರೂ ಅಭಿಮಾನಿಗಳ ಮನ ಗೆದ್ದ ಹಾರ್ದಿಕ್ ಪಾಂಡ್ಯ..!
ಹಾರ್ದಿಕ್ ಪಾಂಡ್ಯ…ಟೀಮ್ ಇಂಡಿಯಾದ ಹೊಡಿಬಡಿ ಆಟಗಾರ. ಆದ್ರೆ ವಿಚಿತ್ರ ವ್ಯಕ್ತಿತ್ವದ ಕ್ರಿಕೆಟಿಗ. ಯಾಕಂದ್ರೆ ಹಾರ್ದಿಕ್ ಪಾಂಡ್ಯ ಅವರನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೊಂದು ಸುಲಭವಿಲ್ಲ.
ಎದುರಾಳಿ ಬೌಲರ್ ಯಾರೇ ಆಗಿರಲಿ.. ಹಾರ್ದಿಕ್ ಪಾಂಡ್ಯ ಕ್ಯಾರೇ ಮಾಡಲ್ಲ. ಎಷ್ಟೇ ವೇಗದ ಎಸೆತವಿರಲಿ, ನಿಖರವಾದ ಎಸೆತವಿರಲಿ.. ಹಾರ್ದಿಕ್ ಪಾಂಡ್ಯ ಬ್ಯಾಟ್ ಮಾತ್ರ ಪ್ರಜ್ವಲಿಸುತ್ತಲೇ ಇರುತ್ತದೆ. ಅದು ಹೊಂದಾಣಿಕೆಯ ಆಟಕ್ಕೂ ಸೈ, ಏಕಾಂಗಿ ಹೋರಾಟಕ್ಕೂ ಜೈ ಅನ್ನೋ ಸಿದ್ಧಾಂತವನ್ನು ಮೈಗೂಡಿಸಿಕೊಂಡಿರುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ.
ಹಾಗೇ ನೋಡಿದ್ರೆ ಆಸ್ಟ್ರೇಲಿಯಾ ಪ್ರವಾಸದ ಟಿ-ಟ್ವೆಂಟಿ ಸರಣಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಹಾರ್ದಿಕ್ ಪಾಂಡ್ಯ ಎಂಬುದರಲ್ಲಿ ಎರಡು ಮಾತಿಲ್ಲ.
ಇದಕ್ಕೆ ಪೂರಕವಾಗಿ ಹಾರ್ದಿಕ್ ಪಾಂಡ್ಯ ಅವರಿಗೆ ಟಿ-ಟ್ವೆಂಟಿ ಸರಣಿಯಲ್ಲಿ ಅರ್ಹವಾಗಿಯೇ ಸರಣಿ ಶ್ರೇಷ್ಠ ಪ್ರಶಸ್ತಿಯೂ ಒಲಿದು ಬಂತು.
ಆದ್ರೆ ಹಾರ್ದಿಕ್ ಪಾಂಡ್ಯ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಟೀಮ್ ಇಂಡಿಯಾದ ಯಾರ್ಕರ್ ಕಿಂಗ್ ನಟರಾಜನ್ ಅವರ ಜೊತೆ ಹಂಚಿಕೊಂಡ್ರು. ಯಾಕಂದ್ರೆ ಚೊಚ್ಚಲ ಸರಣಿಯನ್ನಾಡುತ್ತಿರುವ ನಟರಾಜನ್ ಕೂಡ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿಗೂ ಸಹಕರಿಸಿದ್ರು. ಹೀಗಾಗಿ ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಪ್ರಶಸ್ತಿಯಲ್ಲಿ ನಟರಾಜನ್ ಅವರ ಪಾಲೂ ಇದೆ ಅಂತ ಪ್ರಶಸ್ತಿಯನ್ನು ಹಂಚಿಕೊಂಡು ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಹಾರ್ದಿಕ್ ಪಾಂಡ್ಯ, ನಟರಾಜನ್ ನೀವು ಈ ಸರಣಿಯಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದೀರಿ. ಸಂಕಷ್ಟದ ಸ್ಥಿತಿಯಲ್ಲೂ ಶ್ರೇಷ್ಠ ಬೌಲಿಂಗ್ ಪ್ರದರ್ಶನ ಹೊರಹೊಮ್ಮಿದೆ. ಇದು ನಿಮ್ಮಬದ್ಧತೆ, ಕಠಿಣ ಶ್ರಮವನ್ನು ತೋರಿಸುತ್ತೆ. ನೀವು ನನ್ನ ಕಡೆಯಿಂದ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆಯಲು ಅರ್ಹರಾಗಿದ್ದೀರಿ. ಸಹೋದರ ಅಭಿನಂದನೆಗಳು ಅಂತ ಪಾಂಡ್ಯ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಈ ರೀತಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹಂಚಿಕೊಂಡಿರುವುದು ಟೀಮ್ ಇಂಡಿಯಾದಲ್ಲಿ ಹೊಸದೇನೂ ಅಲ್ಲ. ಈ ಹಿಂದೆ ಗೌತಮ್ ಗಂಭೀರ್ ತನಗೆ ಸಿಕ್ಕಿರುವ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ವಿರಾಟ್ ಕೊಹ್ಲಿಗೂ ನೀಡಿದ್ದರು. ಅದೇ ರೀತಿ ಧೋನಿ, ರೋಹಿತ್ ಶರ್ಮಾ ಕೂಡ ಸರಣಿ ಗೆದ್ದಾಗ ಯುವ ಆಟಗಾರರ ಕೈಗೆ ಟ್ರೋಫಿಯನ್ನು ನೀಡಿರುವಂತಹ ಅನೇಕ ಘಟನೆಗಳು ನಡೆದಿವೆ.
ಈ ನಡುವೆ ನಟರಾಜನ್ ಅವರು ನಾಯಕ ವಿರಾಟ್ ಕೊಹ್ಲಿಯ ಮನವನ್ನು ಗೆದ್ದಿದ್ದಾರೆ. ಯಾರ್ಕರ್ ಕಿಂಗ್ ಮುಂದಿನ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾದ ಆಸ್ತಿಯಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಒಟ್ಟಿನಲ್ಲಿ ತಮಿಳುನಾಡಿನ ಪ್ರತಿಭೆ ನಟರಾಜನ್ ಟೀಮ್ ಇಂಡಿಯಾ ಪರ ವಿಶ್ವ ಕ್ರಿಕೆಟ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅರಬ್ ರಾಷ್ಟ್ರದಲ್ಲಿ ನಡೆದ ಭಾರತದ ಐಪಿಎಲ್ ಟೂರ್ನಿ.








