Hassan : ಮದುವೆ ನಿಶ್ಚಯವಾಗಿದ್ದವನ ಜೊತೆಗೆ ತೆರಳಿದ್ದ ಅಪ್ರಾಪ್ತೆ ಅನುಮಾನಾಸ್ಪದ ರೀತಿಯಲ್ಲಿ ಸಾವು
ಮದುವೆ ನಿಶ್ಚಯವಾಗಿದ್ದವನ ಜೊತೆಗೆ ತೆರಳಿದ್ದ ಅಪ್ರಾಪ್ತೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ..
ಕೂಡ್ಲೂರು ಗ್ರಾಮದ ದಿನೇಶ್ ಎಂಬಾತನ ಜೊತೆಗೆ 16 ವರ್ಷದ ಅಪ್ರಾಪ್ತೆಗೆ ಮನೆಯವರು ಸೇರಿ ಮದುವೆ ನಿಶ್ಚಯ ಮಾಡಿದ್ದರು..
ಎರೆಡು ತಿಂಗಳ ಹಿಂದೆ ಮದುವೆ ಮಾತುಕತೆ ನಡೆದಿತ್ತು.. ಇತ್ತ ಬಾಲಕಿಯನ್ನ ದಿನೇಶ್ ನವೆಂಬರ್ 29 ರಂದು ರಾಮನಾಥಪುರ ಷಷ್ಠಿ ಜಾತ್ರೆಗೆಂದು ಕರೆದೊಯ್ದಿದ್ದ.
ಮಧ್ಯಾಹ್ನ 2:30 ರ ವೇಳೆಗೆ ದಿನೇಶ್ ಆಕೆಯನ್ನು ಕರೆದೊಯ್ದಿದ್ದು 4 ಗಂಟೆ ವೇಳೆಗೆ ಆಕೆಯ ಪೋಷಕರಿಗೆ ಕರೆ ಮಾಡಿ, ನಿಮ್ಮ ಮಗಳು ವಿಷ ಕುಡಿದಿದ್ದಾಳೆ ಎಂದು ತಿಳಿಸಿದ್ದಾನೆ.
ಆಕೆಯನ್ನು ಬಳಿಕ ದಿನೇಶ್ ಕುಟುಂಬದವರು ಹಾಸನದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾರೆ. ಆದರೆ ಆಕೆ ಆಸ್ಪತ್ರೆಗೆ ದಾಖಲಾಗುವ ವೇಳೆಗೆ ಮೃತಪಟ್ಟಿದ್ದಾಳೆ.
ಇದೇ ವೇಳೆ ದಿನೇಶ್ ಕೂಡ ವಿಷ ಸೇವಿಸಿರುವುದು ತಿಳಿದುಬಂದಿದ್ದು, ಆತನಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗಳ ಸಾವಿನ ಬಗ್ಗೆ ಅನುಮಾನಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಂದ ಘಟನೆ ಬಗ್ಗೆ ತನಿಖೆಗೆ ಎಸ್ಪಿಗೆ ದೂರು ನೀಡಲಾಗಿದೆ.
ಚೈಲ್ಡ್ ಲೈನ್ಗೆ ಬಂದ ಅಪರಿಚಿತ ಕರೆ ಆಧರಿಸಿ ಪೋಷಕರಿಂದ ಮಾಹಿತಿ ಪಡೆದು ದೂರು ದಾಖಲಿಸಲಾಗಿದೆ.
ತನಿಖೆ ವೇಳೆ ಬಾಲಕಿಯ ಮೃತದೇಹದ ಮೇಲೆ ಗಾಯದ ಗುರುತು, ಕುತ್ತಿಗೆಯಲ್ಲಿ ಪೆಟ್ಟಾಗಿರುವ ಗುರುತು ಪತ್ತೆಯಾಗಿದೆ. ಈ ಹಿನ್ನೆಲೆ ಬಾಲಕಿ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕೊಣನೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು , ಪೊಲೀಸರು ತನಿಖೆ ಮುಂದುವರೆಸಿದ್ದಾರೆ..
Hassan , minor girl died suspisiously