ಮುಳುಗುವ ಹಡಗಿನ ಜೊತೆ ಹೊಂದಾಣಿಕೆ ಬೇಡ : ಹೆಚ್.ಡಿ.ರೇವಣ್ಣ
ಹಾಸನ : ಎರಡು ಮಹಾನಗರ ಪಾಲಿಕೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಜೆಡಿಎಸ್ ನಾಯಕ ಹೆಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದ್ದು, ಮುಳುಗುವ ಹಡಗಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ ಎಂದು ತಿರುಗೇಟು ನೀಡಿದ್ದಾರೆ.
ಈ ಹಿಂದೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯದಲ್ಲಿ ಜೆಡಿಎಸ್ ಮುಳುಗುವ ಹಡಗು ಎಂದು ಟೀಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರೇವಣ್ಣ, ಬೊಮ್ಮಾಯಿ ಅವರಿಗೆ ಟಾಂಗ್ ನೀಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮುಳುಗುವ ಹಡಗು ಎಂದು ಈಗಾಗಲೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಹೀಗಾಗಿ ಜೆಡಿಎಸ್ ಜೊತೆ ಹೊಂದಾಣಿಕೆಯಂತಹ ಸಾಹಸಕ್ಕೆ ಕೈಹಾಕಿ ಮುಖ್ಯಮಂತ್ರಿಗಳು ತಮ್ಮ ಕುರ್ಚಿಗೆ ಕುತ್ತು ತಂದುಕೊಳ್ಳಬೇಡಿ.
ಮುಳುಗುವ ಹಡಗಿನ ಜೊತೆ ಹೊಂದಾಣಿಕೆ ಬೇಡ, ಇನ್ನೂ ಎರಡು ವರ್ಷ ನೀವೆ ಸಿಎಂ ಆಗಿ ಇರಬೇಕು ಎಂದು ಸಿಎಂಗೆ ಕಿವಿಮಾತು ಹೇಳಿದ್ದಾರೆ.