ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಪಟ್ಟದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ಬಾರಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಡಾ.ಜಿ.ಪರಮೇಶ್ವರ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ತನಗೆ ಮೂರು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಕೈತಪ್ಪಿತು ಎಂದು ತುಮಕೂರಿನಲ್ಲಿ ಪರಮೇಶ್ವರ್ ವ್ಯಕ್ತಪಡಿಸಿದ್ದ ನೋವಿಗೆ ಕುಮಾರಸ್ವಾಮಿ ಈಗ ಅಂಕಿ ಅಂಶಗಳ ಸಮೇತ ತಿರುಗೇಟು ನೀಡಿದ್ದಾರೆ.
ಪರಮೇಶ್ವರ್ ಅವರೇ ಸಿಎಂ ಆಗಿ ಎಂದು ನಾನೇ ಹೇಳಿದ್ದೆ
ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಅಂದು ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಡಾ.ಜಿ.ಪರಮೇಶ್ವರ್ ಅವರು ನನ್ನ ಬಳಿ ಬಂದಾಗ ನಾನೇ ಅವರಿಗೆ ಮುಖ್ಯಮಂತ್ರಿಯಾಗಿ ಎಂದು ಆಫರ್ ನೀಡಿದ್ದೆ. ಅಂದು ನಾನೇ ಖುದ್ದಾಗಿ ನೀವು ಸಿಎಂ ಆಗಿ ಎಂದು ಹೇಳಿದಾಗಲೂ ಅವರು ಒಪ್ಪಲಿಲ್ಲ. ನಾನು ಸಿಎಂ ಆಗಬೇಡಿ ಎಂದು ಅವರಿಗೆ ಅಡ್ಡಿಪಡಿಸಿರಲಿಲ್ಲ. ಅಂದು ಅವರು ಮುಖ್ಯಮಂತ್ರಿಯಾಗಿದ್ದರೆ ನಾನೇ ಬೆಂಬಲ ನೀಡುತ್ತಿದ್ದೆ ಎಂದು ಹಳೆಯ ಘಟನೆಯನ್ನು ಸ್ಮರಿಸಿದರು.
ನಿಮ್ಮ ಪಕ್ಷದವರನ್ನೇ ಕೇಳಿ ಎಂದು ಟಾಂಗ್
ಪರಮೇಶ್ವರ್ ಅವರಿಗೆ ಸಿಎಂ ಪಟ್ಟ ಕೈತಪ್ಪಲು ಹೊರಗಿನವರೇನು ಕಾರಣವಲ್ಲ, ಬದಲಿಗೆ ಅವರ ಸ್ವಂತ ಪಕ್ಷದವರೇ ಅಡ್ಡಗಾಲು ಹಾಕಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. ಪರಮೇಶ್ವರ್ ಅವರು ನಮ್ಮ ಬಗ್ಗೆ ಮಾತನಾಡುವ ಮೊದಲು ಅಥವಾ ಬೇರೆಯವರ ಮೇಲೆ ಗೂಬೆ ಕೂರಿಸುವ ಮೊದಲು, ತಮ್ಮದೇ ಪಕ್ಷದ ನಾಯಕರ ಜೊತೆ ಚರ್ಚೆ ನಡೆಸಲಿ. ನಿಮ್ಮ ಕಾಲೆಳೆದವರು ಯಾರು ಎಂಬುದು ನಿಮಗೂ ಗೊತ್ತು. ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯದಿಂದಲೇ ಅವರು ಅಧಿಕಾರ ವಂಚಿತರಾಗಿದ್ದಾರೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಪರಮೇಶ್ವರ್ ಹೇಳಿದ್ದೇನು?
ಇತ್ತೀಚೆಗೆ ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಡಾ.ಜಿ.ಪರಮೇಶ್ವರ್, ತಮ್ಮ ರಾಜಕೀಯ ಜೀವನದ ಸಂಕಟವನ್ನು ಹೊರಹಾಕಿದ್ದರು. ನನಗೆ ಮೂರು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಬಂದಿತ್ತು ಆದರೆ ಅದು ಕೈತಪ್ಪಿತು. 2013ರಲ್ಲಿ ನಾನು ಚುನಾವಣೆಯಲ್ಲಿ ಸೋತಿದ್ದರಿಂದ ಸಿದ್ದರಾಮಯ್ಯ ಸಿಎಂ ಆದರು. ಆ ನಂತರ ಮೈತ್ರಿ ಸರ್ಕಾರದ ಅವಧಿಯಲ್ಲಿ ಹಾಗೂ ಈ ಬಾರಿಯೂ ಹಲವು ಕಾರಣಗಳಿಂದ ಅವಕಾಶ ಸಿಗಲಿಲ್ಲ ಎಂದು ಭಾವುಕರಾಗಿ ನುಡಿದಿದ್ದರು. ಸದ್ಯ ಗೃಹ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ, ನನಗೆ ಉಪಮುಖ್ಯಮಂತ್ರಿಯಾದ ಅನುಭವವೂ ಇದೆ ಎಂದು ಅವರು ಹೇಳಿಕೊಂಡಿದ್ದರು.
ಪರಮೇಶ್ವರ್ ಅವರ ಅಳಲು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಕುಮಾರಸ್ವಾಮಿ ನೀಡಿರುವ ಈ ಹೇಳಿಕೆ ಈಗ ಕಾಂಗ್ರೆಸ್ ಪಾಳೆಯದಲ್ಲಿ ತಳಮಳ ಸೃಷ್ಟಿಸಿದೆ. ಪರಮೇಶ್ವರ್ ಅವರ ಸಿಎಂ ಕನಸಿಗೆ ಅಡ್ಡಿಯಾದವರು ಯಾರು ಎಂಬ ಚರ್ಚೆ ಮತ್ತೆ ಕಾವೇರಿದೆ.








