ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಸಚಿವ ಹೆಚ್.ಸಿ. ಬಾಲಕೃಷ್ಣ ನಡುವಿನ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ತಮ್ಮ ವಿರುದ್ಧ ‘ಗನ್ ತೋರಿಸಿ ಬೆದರಿಕೆ ಹಾಕಿದ್ದರು’ ಎಂಬ ಆರೋಪ ಮಾಡಿರುವ HDK ವಿರುದ್ಧ ಸಚಿವ ಬಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕೃಷ್ಣ, ಕುಮಾರಸ್ವಾಮಿ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದು, ತಮ್ಮ ಧರ್ಮಪತ್ನಿ, ಸ್ವಂತ ಪಿಎಗಳು ಹಾಗೂ ಆಪ್ತರ ಫೋನ್‌ಗಳನ್ನೇ ಟ್ಯಾಪ್ ಮಾಡಿಸಿದವರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
‘ಬೆದರಿಕೆ ತಂತ್ರಗಳು ನನ್ನ ಬಳಿ ನಡೆಯಲ್ಲ’
ಕುಮಾರಸ್ವಾಮಿ ಅವರ ರಾಜಕೀಯ ಧೋರಣೆಯನ್ನು ಟೀಕಿಸಿದ ಬಾಲಕೃಷ್ಣ, ಅವರು ‘ಹಿಟ್ ಅಂಡ್ ರನ್’ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಅಧಿಕಾರದಲ್ಲಿದ್ದಾಗ ಕುಮಾರಸ್ವಾಮಿ ಅವರು ತಮ್ಮ ಧರ್ಮಪತ್ನಿ, ಪಿಎಗಳು, ಆಪ್ತರು ಸೇರಿದಂತೆ ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ಮಾಡಿಸಿದ ಇತಿಹಾಸ ಹೊಂದಿದ್ದಾರೆ ಎಂದು ಬಾಲಕೃಷ್ಣ ಆರೋಪಿಸಿದರು.
“ಸ್ವಂತ ಹೆಂಡತಿಯನ್ನೇ ನಂಬದ ಇಂತಹ ವ್ಯಕ್ತಿ ಸಮಾಜವನ್ನು ಹೇಗೆ ನಂಬುತ್ತಾರೆ?” ಎಂದು ಪ್ರಶ್ನಿಸಿದ ಅವರು, ತಮ್ಮ ವಿರುದ್ಧದ ಬೆದರಿಕೆ ತಂತ್ರಗಳು ಯಾವುದೇ ಕಾರಣಕ್ಕೂ ನಡೆಯುವುದಿಲ್ಲ ಎಂದರು.
ಮಾಗಡಿ ಕ್ಷೇತ್ರದ ಜನತೆ ತಮ್ಮ ಸೇವೆಯನ್ನು ಮೆಚ್ಚಿ ಐದು ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಕೇಂದ್ರದಲ್ಲಿ ಕೆಲಸವಿಲ್ಲದೆ ತಮ್ಮ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಬಾಲಕೃಷ್ಣ ವಾಗ್ದಾಳಿ ನಡೆಸಿದರು.
‘ಆರೋಪ ಸಾಬೀತುಪಡಿಸಿ ಅಥವಾ ಕ್ಷಮೆ ಕೇಳಿ’
ತಮ್ಮ ವಿರುದ್ಧದ ಗನ್ ಪಾಯಿಂಟ್ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಬಾಲಕೃಷ್ಣ, ತಮ್ಮ ಬಳಿ ಯಾವುದೇ ಬಂದೂಕು ಇಲ್ಲ ಹಾಗೂ ಬಂದೂಕಿನ ಲೈಸೆನ್ಸ್ ಕೂಡ ಇಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ರಾಜಕೀಯ ಜೀವನದಲ್ಲಿ ಗನ್ ಅಥವಾ ಕತ್ತಿ ತೋರಿಸಿ ಹೆದರಿಸುವ ರಾಜಕಾರಣ ಮಾಡಿಲ್ಲ. ಆರೋಪ ಮಾಡಿರುವುದಾದರೆ ಅದನ್ನು ಸಾಬೀತುಪಡಿಸಲಿ ಅಥವಾ ಬಹಿರಂಗವಾಗಿ ಕ್ಷಮೆ ಕೇಳಲಿ ಎಂದು ಕುಮಾರಸ್ವಾಮಿಗೆ ಸವಾಲು ಹಾಕಿದರು.
ತಮ್ಮ ರಾಜಕೀಯ ಜೀವನದಲ್ಲಿ ಸಣ್ಣಪುಟ್ಟ ಲೋಪಗಳು ನಡೆದಿರಬಹುದು ಎಂದು ಒಪ್ಪಿಕೊಂಡ ಬಾಲಕೃಷ್ಣ, ಆದರೆ ಸಾರ್ವಜನಿಕ ಜೀವನದಲ್ಲಿ ಗೌರವ ಮತ್ತು ಘನತೆಯನ್ನು ಕಾಪಾಡಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.
HDK ಹಾಗೂ ಬಾಲಕೃಷ್ಣ ನಡುವಿನ ಈ ಆರೋಪ-ಪ್ರತ್ಯಾರೋಪಗಳು ರಾಮನಗರದ ರಾಜಕೀಯ ವಲಯದಲ್ಲಿ ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿವೆ.








