ಉಡುಪಿ: ಕರಾವಳಿ ಜಿಲ್ಲೆಯ ದಾರ್ಮಿಕ ಕ್ಷೇತ್ರಗಳ ಪ್ರವಾಸದಲ್ಲಿರುವ ದಕ್ಷಿಣ ಭಾರತದ ಖ್ಯಾತ ನಟ ಜೂನಿಯರ್ ಎನ್ ಟಿಆರ್ (Jr NTR) ಕೆರಾಡಿ ಗ್ರಾಮದ ಮೂಡುಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೆ (Mudugallu Keshavanatheshwara Temple) ಭೇಟಿ ನೀಡಿದ್ದಾರೆ.
ಕನ್ನಡದ ಹೆಮ್ಮೆಯ ನಟ ರಿಷಬ್ ಶೆಟ್ಟಿ (Rishab Shetty) ಊರಾಗಿರುವ ಕೆರಾಡಿಗೆ ಜೂನಿಯರ್ ಎನ್‌ಟಿಆರ್ ಇಂದು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಮ್ಮನ ಆಸೆ ತೀರಿಸಲು ನಂದಮೂರಿ ತಾರಕ್ ರಾಮ್ ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದಿದ್ದಾರೆ.
ಕಾಡು, ಬಂಡೆ ನಡುವೆ ಇರುವ ಪ್ರಾಕೃತಿಕ ರಮಣೀಯತೆಗೆ ತಾರಕ್ ಮಾರು ಹೋಗಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ದಂಪತಿ ಕೂಡ ಇದ್ದರು. ಜೂ.ಎನ್‌ಟಿಆರ್ ತಾಯಿ ಶಾಲಿನಿ ನಂದಮೂರಿ ಕರಾವಳಿಗೆ ಬರೋಬ್ಬರಿ 4 ದಶಕಗಳ ನಂತರ ಆಗಮಿಸಿದ್ದಾರೆ. ಜೂ. ಎನ್ ಟಿಆರ್ ಅವರೊಂದಿಗೆ ಪತ್ನಿ ಲಕ್ಷ್ಮಿ ಪ್ರಣತಿ, ಪ್ರಗತಿ ರಿಷಬ್, ಪ್ರಶಾಂತ್ ನೀಲ್, ಲಿಖಿತಾ ನೀಲ್ ಕೂಡ ಇದ್ದರು ಎನ್ನಲಾಗಿದೆ. ನಿನ್ನೆಯಷ್ಟೇ ಈ ಸೆಲೆಬ್ರಿಟಿಗಳು ಹಾಗೂ ಕುಟುಂಬಸ್ಥರು ಮೂಕಾಂಬಿಕೆಯ ದರ್ಶನ ಮಾಡಿದ್ದರು. ಶನಿವಾರ ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದಿದ್ದರು.