ಭಾರತೀಯ ರೈಲ್ವೆ ನೌಕರರಿಗೆ ಆರೋಗ್ಯ ವಿಮಾ ರಕ್ಷಣೆ
ಹೊಸದಿಲ್ಲಿ, ಅಗಸ್ಟ್ 20: ಭಾರತೀಯ ರೈಲ್ವೆ ತನ್ನ 13 ಲಕ್ಷ ಉದ್ಯೋಗಿಗಳಿಗೆ ಆರೋಗ್ಯ ವಿಮಾ ಯೋಜನೆಯನ್ನು ಒದಗಿಸುವ ಮೂಲಕ ವೈದ್ಯಕೀಯ ಚಿಕಿತ್ಸೆಯ ವ್ಯಾಪ್ತಿಯನ್ನು ವಿಸ್ತರಿಸಲು ಚಿಂತನೆ ನಡೆಸಿದೆ. ‘ರೈಲ್ವೆ ನೌಕರರ ಉದಾರೀಕೃತ ಆರೋಗ್ಯ ಯೋಜನೆ’ ಮತ್ತು ‘ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳು’ ಮೂಲಕ ಈಗಾಗಲೇ ತನ್ನ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ವೈದ್ಯಕೀಯ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಭಾರತೀಯ ರೈಲ್ವೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ರೈಲ್ವೆ ಈಗ ರೈಲ್ವೆ ನೌಕರರ ವೈದ್ಯಕೀಯ ಚಿಕಿತ್ಸೆಯ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಸ್ತಾಪಿಸುತ್ತಿದೆ” ಎಂದು ರೈಲ್ವೆ ಇಲಾಖೆ ಹೇಳಿದ್ದು, ಅದರಂತೆ, ವೈದ್ಯಕೀಯ, ತುರ್ತು ಪರಿಸ್ಥಿತಿಗಳು ಮತ್ತು ಇನ್ನಿತರ ಸಂದರ್ಭಗಳಲ್ಲಿ ಹಣಕಾಸಿನ ಅಪಾಯಗಳ ವಿರುದ್ಧ ವಿಮಾ ರಕ್ಷಣೆಯನ್ನು ಒದಗಿಸುವ ಉದ್ದೇಶದಿಂದ ರೈಲ್ವೆ ಸಿಬ್ಬಂದಿಗೆ ಸಮಗ್ರ ಆರೋಗ್ಯ ವಿಮಾ ಯೋಜನೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಪರೀಕ್ಷಿಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತೀಯ ರೈಲ್ವೆ ವಲಯ ರೈಲ್ವೆ ಮತ್ತು ಉತ್ಪಾದನಾ ಘಟಕಗಳ ಎಲ್ಲಾ ಸಾಮಾನ್ಯ ವ್ಯವಸ್ಥಾಪಕರಿಗೆ ಮೇಲಿನ ಪ್ರಸ್ತಾಪದ ಬಗ್ಗೆ ತಮ್ಮ ಅಭಿಪ್ರಾಯ / ಸಲಹೆಗಳನ್ನು ತಿಳಿಸಲು ವಿನಂತಿಸಿದೆ. ಭಾರತೀಯ ರೈಲ್ವೆ 586 ಆರೋಗ್ಯ ಘಟಕಗಳು, 45 ಉಪ-ವಿಭಾಗೀಯ ಆಸ್ಪತ್ರೆಗಳು, 56 ವಿಭಾಗೀಯ ಆಸ್ಪತ್ರೆಗಳು, ಎಂಟು ಉತ್ಪಾದನಾ ಘಟಕಗಳ ಆಸ್ಪತ್ರೆಗಳು, 16 ವಲಯ ಆಸ್ಪತ್ರೆಗಳನ್ನು ಹೊಂದಿದ್ದು ದೇಶಾದ್ಯಂತ 2500 ಕ್ಕೂ ಹೆಚ್ಚು ವೈದ್ಯರ ಹುದ್ದೆಗಳೊಂದಿಗೆ 35,000 ಕ್ಕೂ ಹೆಚ್ಚು ಅರೆವೈದ್ಯರನ್ನು ಹೊಂದಿದೆ.

ಸಾಂಕ್ರಾಮಿಕ ಸಮಯದಲ್ಲಿ, ರೈಲ್ವೆ ತನ್ನ 125 ಆಸ್ಪತ್ರೆಗಳಿಂದ ಅರ್ಧದಷ್ಟು ಹಾಸಿಗೆಗಳನ್ನು ಹೊಂದಿರುವ 6,500 ಕ್ಕೂ ಹೆಚ್ಚು ಆಸ್ಪತ್ರೆಯ ಹಾಸಿಗೆಗಳನ್ನು ದೇಶಾದ್ಯಂತ ಕೋವಿಡ್-19 ರೋಗಿಗಳಿಗೆ ಅರ್ಪಿಸಿದೆ.








