BJP | ನಮ್ಮ ಸರ್ಕಾರ ಯಾವುದೇ ಧರ್ಮದವರನ್ನು ತಲೆ ಮೇಲೆ ಇಟ್ಟುಕೊಳ್ಳಲ್ಲ
ಬೆಂಗಳೂರು : ನಮ್ಮ ಸರ್ಕಾರ ಯಾವುದೇ ಧರ್ಮದವರನ್ನು ತಲೆ ಮೇಲೆ ಇಟ್ಟುಕೊಳ್ಳುವುದಿಲ್ಲ. ಸರ್ಕಾರದ ದೃಷ್ಠಿಯಲ್ಲಿ ಎಲ್ಲರೂ ಸಮಾನರು, ಇದೇ ಬಿಜೆಪಿಯ ವೈಶಿಷ್ಟ್ಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಹಲಾಲ್, ಅಜಾನ್ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಟೀಕೆಗಳು ಬರುತ್ತಿದ್ದು, ಈ ಬಗ್ಗೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ನಮ್ಮ ಸರ್ಕಾರ ಯಾವುದೇ ಧರ್ಮದವರನ್ನು ತಲೆ ಮೇಲೆ ಇಟ್ಟುಕೊಳ್ಳುವುದಿಲ್ಲ. ಈ ರಾಜ್ಯದ ಪ್ರತಿ ಪ್ರಜೆಗೂ ಸರ್ಕಾರಕ್ಕೆ ಸಮಾನ. ಇದೇ ಬಿಜೆಪಿಯ ವೈಶಿಷ್ಟ್ಯ ಎಂದರು.
ಇದೇ ವೇಳೆ ಆರ್ ಎಸ್ ಎಸ್ ವಿರುದ್ಧ ಟೀಕೆ ಬಗ್ಗೆ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಶದ ಅಭಿವೃದ್ಧಿಗೆ, ದೇಶದ ಜನರಿಗಾಗಿ ಮೀಸಲಾಗಿದೆ.
ಸ್ವಯಂಸೇವಕರ ಬದುಕು ದೇಶಸೇವೆಗೆ ಮುಡಿಪಾಗಿದೆ. ಸಂಘದ ಬಗ್ಗೆ ಅನುಮಾನ ಇರುವವರು ಸ್ವಯಂಸೇವಕರೊಂದಿಗೆ ಒಂದು ದಿನ ಕಳೆಯಬೇಕು.
ಆಗ ಅವರಿಗೆ ಜ್ಞಾನೋದಯವಾಗುತ್ತದೆ. ಆರ್ ಎಸ್ಎಸ್ ನ ಚರಿತ್ರೆ ಗೊತ್ತಿಲ್ಲದವರು ಅದರ ಬಗ್ಗೆ ಮಾತನಾಡುತ್ತಿದ್ದಾರೆ.
ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಬಗ್ಗೆ ಓದಿದರೆ ಸಂಘದ ಬಗ್ಗೆ ತಿಳಿದುಬರುತ್ತದೆ. ದೇಶದಲ್ಲಿ ಆರ್ ಎಸ್ಎಸ್ ಇದೆ ಎಂದರೆ ಅದಕ್ಕಾಗಿ ಹೆಮ್ಮೆ ಪಡಬೇಕು ಎಂದರು.
ಕೋವಿಡ್ ಬಂದಾಗ ಆರ್ ಎಸ್ಎಸ್ ಸ್ವಯಂಸೇವಕರು ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದಾರೆ. ಜನರ ಮನೆಮನೆಗೆ ತೆರಳಿ ಆಹಾರ ಸಾಮಗ್ರಿಗಳನ್ನು ಕೊಟ್ಟಿದ್ದಾರೆ.
ನಾವು ಇದನ್ನು ಮಾಡಿದ್ದೇವೆ ಎಂದೂ ಸ್ವಯಂಸೇವಕರು ಹೇಳಿಲ್ಲ. ಇಂತಹ ಸಂಘವನ್ನು ಹಾಸ್ಯ, ಟೀಕೆ ಮಾಡುವುದು ಸರಿಯಲ್ಲ ಎಂದು ಸಚಿವರು ಹೇಳಿದರು. health minister dr k sudhakar reaction on rss









