ಮಹಾಮಾರಿ ಕೊರೊನಾ ವಾರಿಯರ್ ಆಗಿ ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿರುವ ಕಿರಿಯ ಆರೋಗ್ಯ ಸಹಾಯಕಿಯರ ಮೈ ಮೇಲೆ ಆಟೋ ಚಲಾಯಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ರಾಜ್ಯದ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಕೇಂದ್ರ ಸಂಘದ ಬೆಳಗಾವಿ ಶಾಖೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಹೌದು ಕಿಲ್ಲರ್ ಕೊರೊನಾ ವಕ್ಕರಿಸಿಕೊಂಡ ದಿನದಿಂದಲೂ ಸೋಂಕು ತಡೆಗಟ್ಟಲು ದಾದಿಯರು, ವೈದ್ಯರು, ಪೊಲೀಸರು. ಅಂಗನವಾಡಿ-ಆಶಾ ಕಾರ್ಯಕರ್ತೆರು ಸೇರಿದಂತೆ ಮುಂತಾದವರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದ್ರೆ ಇವರ ಮೇಲೆ ಅಲ್ಲಲ್ಲಿ ಹಲ್ಲೆ ಪ್ರಕರಣಗಳು ಕಂಡು ಬಂದಿದ್ದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ.
ಇದೇ ರೀತಿ ಘಟನೆ ಬೆಳಗಾವಿಯ ಹಿಂಡಲಗಾ-ಜ್ಯೋತಿ ನಗರದಲ್ಲಿ ನಡೆದಿದ್ದು. ಕಿರಿಯ ಆರೋಗ್ಯ ಸಹಾಯಕಿ ಜಯಾ ಪರುಶರಾಮ್ ಖೇಮಜಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸರ್ವೇ ಕಾರ್ಯ ಮಾಡುತ್ತಿದ್ದ ವೇಳೆ ಆಟೋ ಚಾಲಕ ವಿನಾಯಕ ಪ್ರಕಾಶ ಬೋರಾಗಡೆ ಎಂಬಾತ ಮೈ ಮೇಲೆ ಆಟೋ ಹರಿಬಿಟ್ಟಿದ್ದಾನೆ.
ಅಷ್ಟೇ ಅಲ್ಲದೇ ಪ್ರಶ್ನೆ ಮಾಡಿದಾಗ ಅವರ ಮೇಲೆ ಹಲ್ಲೆಗೂ ಯತ್ನಿಸಿದ್ದಾನೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹುಡೇದ ಅವರು ನಮ್ಮ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಆದ್ರೆ ಹೀಗೆ ಪದೇ ಪದೇ ಹಲ್ಲೆ ಮಾಡುತ್ತಿರುವುದು ಸರಿಯಲ್ಲ. ಸರ್ಕಾರ ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಾರ್ವತಿ ನೇಗಿನಹಾಳ, ಎ.ಕೆ.ಜೊಲ್ಲೆ, ಕೆ.ಜಿ.ಕಾದ್ರೊಳ್ಳಿ, ಆರ್.ಕೆ.ಪಾಟೀಲ, ಆರ್.ಎಸ್. ಪಾಟೀಲ, ಎ.ಎಸ್.ತಹಶೀಲ್ದಾರ, ಡಿ.ಎನ್.ಹಳ್ಳಿ, ಎನ್.ಡಿ.ಖಾಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.








