Belgaum | ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆ | ಮೈದುಂಬಿ ಹರಿಯುತ್ತಿವೆ ನದಿಗಳು
ಬೆಳಗಾವಿ : ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ವರ್ಷಧಾರೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಗೆ ಸಮೀಪವಿರುವ ಜಲಪಾತಗಳು ಮೈದುಂಬಿ ಹರಿಯುತ್ತಿವೆ.
ಕರ್ನಾಟಕ ಗೋವಾ ಗಡಿಯ ಪಶ್ಚಿಮ ಘಟ್ಟದಲ್ಲಿರುವ ಧೂದ್‌ಸಾಗರ್, ಶಿಂಭೋಲಾ, ಸಡಾ ಫಾಲ್ಸ್ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಮನಮೋಹಕವಾಗಿವೆ.
ಈ ಜಲಪಾತಗಳು ಬೆಳಗಾವಿ ನಗರದಿಂದ 60 ರಿಂದ 65 ಕಿಮೀ ಅಂತರದಲ್ಲಿವೆ.

ಬೆಳಗಾವಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಜಿಟಿಜಿಟಿ ಮಳೆಯಾಗುತ್ತಿದ್ದು, ಮುಂದಿನ 3 ರಿಂದ 5 ದಿನ ಭಾರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ರಾಜ್ಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ.
ಬೆಳಗಾವಿ ಜಿಲ್ಲೆಯ ಕೃಷ್ಣಾ,ದೂಧಗಂಗಾ, ವೇದಗಂಗಾ ನದಿಗಳಿಗೆ ಅಪಾರ ಪ್ರಮಾಣದ ನೀರು ಬರುತ್ತಿವೆ.
ಹೀಗಾಗಿ ಚಿಕ್ಕೋಡಿ, ರಾಯಬಾಗ, ಅಥಣಿ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ.
ಈಗಾಗಲೆ ನದಿ ಪಾತ್ರದಲ್ಲಿ ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ..
ಎನ್.ಡಿ.ಆರ್. ಎಪ್ ತಂಡಗಳ ಮೂಲಕ ನದಿ ತೀರದ ಗ್ರಾಮಗಳಲ್ಲಿ ಜಾಗೃತಿ ಅಭಿಯಾನ ಮುಂದುವರೆದಿದೆ.
ಮಳೆ ಹೀಗೆ ಮುಂದುವರೆದಲ್ಲಿ ಪ್ರವಾಹ ಭೀತಿ ಎದುರಾಗುವ ಸಾಧ್ಯತೆ ಇದೆ.