ಮುಂದಿನ ಒಂದು ವಾರದವರೆಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾರಿ ಮಳೆ ಆಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿದೆ. ವಿಶೇಷವಾಗಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಭಾಗಗಳಲ್ಲಿ ಬಿರುಗಾಳಿ ಸಹಿತ ತೀವ್ರ ಮಳೆಯಾಗುವ ಸಾಧ್ಯತೆಯಿದ್ದು, ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಇಂದು ಕರಾವಳಿಯಲ್ಲಿ ಗಂಟೆಗೆ 30-40 ಕಿಮೀ ವೇಗದ ಬಿರುಗಾಳಿ ಬೀಸುವ ಸಂಭವವಿದ್ದು, ಭಾರೀ ಮಳೆಯಾಗಲಿದೆ. ಈ ಪ್ರದೇಶಗಳಲ್ಲಿ ಮಳೆ ಹಾಗೂ ಗಾಳಿಯು ಮುಂದಿನ 2 ದಿನಗಳವರೆಗೆ ಮುಂದುವರೆಯಲಿದ್ದು, ಜನರು ಅಗತ್ಯ ಮುಂಜಾಗ್ರತೆ ವಹಿಸಬೇಕೆಂದು ಸೂಚಿಸಲಾಗಿದೆ.
ಮಧ್ಯ ಕರ್ನಾಟಕದ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗು ಭಾಗದಲ್ಲಿಯೂ ಇಂದು ಮತ್ತು ನಾಳೆ ಭಾರಿ ಮಳೆ ಬೀಳುವ ಮುನ್ಸೂಚನೆ ಇದೆ.
ಅಧಿಕಾರಿಗಳು ಹವಾಮಾನ ಇಲಾಖೆಯ ಮಾಹಿತಿ ಮೇರೆಗೆ ಸಾರ್ವಜನಿಕರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದು, ನಿರಂತರವಾಗಿ ಮಳೆ ಬೀಳುವ ಪ್ರದೇಶಗಳಲ್ಲಿ ವಾಸವಿರುವವರು ಅತೀ ಅವಶ್ಯಕತೆ ಇದ್ದರೆ ಮಾತ್ರ ಹೊರಗೆ ಹೋಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಸಮುದ್ರ ತೀರದಲ್ಲಿ ಮೀನುಗಾರಿಕೆ ಮಾಡಲು ಮುಂದಾಗಬಾರದೆಂಬ ಸೂಚನೆಯನ್ನೂ ನೀಡಲಾಗಿದೆ. ಹೀಗಾಗಿ, ಕರಾವಳಿ ಪ್ರದೇಶಗಳ ನಿವಾಸಿಗಳು ಹಾಗೂ ಪ್ರವಾಸಿಗರು ಹೆಚ್ಚಿನ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅಗತ್ಯವಾಗಿದೆ.








